ADVERTISEMENT

ತೆಂಗು ವಿಶೇಷ ಆರ್ಥಿಕ ವಲಯ ನಿರೀಕ್ಷೆ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:45 IST
Last Updated 15 ಮಾರ್ಚ್ 2017, 7:45 IST

ತುಮಕೂರು: ಐದಾರು ವರ್ಷಗಳಿಂದ ಬರ, ರೋಗ, ಕೀಟ ಬಾಧೆ ಹಾಗೂ ಬೆಲೆ ಕುಸಿತದಿಂದ ತತ್ತರಿಸಿರುವ ತೆಂಗು ಬೆಳೆಗಾರರಿಗೆ ಈ ಸಲದ ರಾಜ್ಯ ಬಜೆಟ್‌ ಕೈ ಹಿಡಿಯಬಹುದೇ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ತೆಂಗು ಬೆಳೆಗಾರರು ಇದ್ದಾರೆ.

ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳನ್ನು ರಫ್ತು ಉತ್ತೇಜಿಸಲು ಜಿಲ್ಲೆಯಲ್ಲಿ ತೆಂಗು ವಿಶೇಷ ಆರ್ಥಿಕ ವಲಯ (ಕೋ–ಸೆಝ್‌) ಬಜೆಟ್‌ನಲ್ಲಿ ಘೋಷಿಸಬಹುದು ಎಂಬ ನಿರೀಕ್ಷೆ ಇದೆ.

ತೆಂಗು ವಿಶೇಷ ಆರ್ಥಿಕ ವಲಯ ಘೋಷಣೆಯಿಂದ ಜಿಲ್ಲೆಯ ತೆಂಗು ದೇಶ–ವಿದೇಶಗಳಲ್ಲಿ ಮಾರುಕಟ್ಟೆ ಪಡೆದುಕೊಳ್ಳಲು ಸಹಾಯಕವಾಗಲಿದೆ. ಇದರಿಂದಾಗಿ ಕೊಬ್ಬರಿ, ತೆಂಗಿನ ಬೆಲೆಯಲ್ಲಿ ಸ್ಥಿರತೆ ಬರಲಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಭೂಮಿ  ಹುಡುಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಂಸದ ಬಿ.ಎಸ್‌.ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಭೂಮಿ ಹುಡುಕುವಂತೆ ಜಿಲ್ಲಾಧಿಕಾರಿ ಸಹ ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌, ತುಮಕೂರು ಸಮೀಪದ ವಿಜ್ಞಾನ ಗುಡ್ಡ ಅಥವಾ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಜ್ರದ ತೀರ್ಥ ರಾಮೇಶ್ವರದಲ್ಲಿ ಭೂಮಿ ಹುಡುಕಾಟ ನಡೆದಿದೆ.

ರಾಜ್ಯ ಮೂಲಭೂತ ಸೌಕರ್ಯ ಇಲಾಖೆ ಈಗಾಗಲೇ ಯೋಜನೆ ರೂಪಿಸುವ ಸಂಬಂಧ 20 ಸಲಹಾ ಸಂಸ್ಥೆಗಳಿಗೆ ಆಹ್ವಾನ ನೀಡಿದೆ. ಕಾಯರ್‌ ಕಾರ್ಪೋರೇಷನ್ ಅವರು ಯೋಜನೆಯ ನೀಲ ನಕ್ಷೆ ರೂಪಿಸುತ್ತಿದ್ದಾರೆ.  ಈ ಕಾರಣದಿಂದಾಗಿ ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ನೀರಾ ಮಂಡಳಿ ಘೋಷಿಸಬಹುದು ಎಂಬ ನಿರೀಕ್ಷೆಯೂ ಇದೆ. ಈಗಾಗಲೇ ತೆಂಗಿನ ಮರಗಳಿಂದ ನೀರಾ ಇಳಿಸಲು ಸರ್ಕಾರ ಕಾನೂನು ಜಾರಿಗೊಳಿಸಿದೆ. ನೀರಾ ಮಂಡಳಿ ಮೂಲಕ ನೀರಾ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬಹುದಾಗಿದೆ.

ಜಿಲ್ಲೆಯಲ್ಲಿ ನೀರಾ ಮಂಡಳಿ ಸ್ಥಾಪನೆ ಬಗ್ಗೆ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆಸಕ್ತಿ ತೋರಿರುವುದರಿಂದ ಈ ಬಗ್ಗೆ ಕುತೂಹಲ ಮೂಡಿದೆ.

‘ಬೆಂಗಳೂರು ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವ ರೀತಿಯಲ್ಲಿ ತುಮಕೂರು ಕೋಕನಟ್ ವ್ಯಾಲಿ ಆಗಬೇಕು. ಈ ನಿಟ್ಟಿನಲ್ಲಿ ವಿಶೇಷ ಆರ್ಥಿಕ ವಲಯ ಹಾಗೂ ನೀರಾ ಮಂಡಳಿ ಎರಡನ್ನೂ ಬಜೆಟ್‌ನಲ್ಲಿ ನೀಡಬೇಕು’ ಎನ್ನುತ್ತಾರೆ ಅಭಿವೃದ್ಧಿ ರೆವುಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌.

ವಸಂತನರಸಾಪುರದಲ್ಲಿರುವ ಕಾಯರ್‌ ಪಾರ್ಕ್, ಶಿರಾ ತಾಲ್ಲೂಕಿನ ಉಜ್ಜನಕುಂಟೆಯ ಕರ್ನಾಟಕ ಹೆರಿಟೇಜ್‌ ಹಬ್‌ ಹಾಗೂ ವಿಶ್ವವಿದ್ಯಾಲಯಕ್ಕೆ ಅನುದಾನವನ್ನು ನೀರಿಕ್ಷಿಸಲಾಗಿದೆ.

***

ವೈದ್ಯಕೀಯ ಕನಸು ನನಸಾಗಲಿದೆಯೇ

ಈ ಸದಲ ಬಜೆಟ್‌ನಲ್ಲಿ ತುಮಕೂರು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ಸಿಗಲಿದೆಯೇ ಎಂಬ ಪ್ರಶ್ನೆ ಕೂಡ ಜಿಲ್ಲೆಯ ಜನರದ್ದಾಗಿದೆ.
ಐದು ವರ್ಷದ ಹಿಂದೆಯೇ ವೈದ್ಯಕೀಯ ಕಾಲೇಜು ಘೋಷಣೆಯಾಗಿದ್ದರೂ ಅನುದಾನ ನೀಡದ ಕಾರಣ ಆರಂಭಗೊಂಡಿಲ್ಲ. ಈ ಸಲವಾದರೂ ಮುಖ್ಯಮಂತ್ರಿ ಅನುದಾನ ನೀಡುತ್ತಾರೆಯೇ  ಎಂದು ಜನರು ಎದುರು ನೋಡುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಪೊಲೀಸ್‌ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ಹೊರಬೀಳಲಿದೆ ಎಂದು ನಂಬಲಾಗಿದೆ.

**

ಅನುದಾನ
ತುಮಕೂರು ನಗರ ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿರುವುದರಿಂದ ಸರ್ಕಾರ ಅನುದಾನ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹ 150 ಕೋಟಿ ಸಿಗಬಹುದು ಎಂಬ ನಿರೀಕ್ಷೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.