ADVERTISEMENT

ಪಂಚಾಯಿತಿ ನಿರ್ಲಕ್ಷ್ಯ: ನೀರಿನ ಘಟಕಕ್ಕೆ ಬೀಗ

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮ: ಬೇರೆ ಗ್ರಾಮಗಳ ಆಶ್ರಯಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:36 IST
Last Updated 18 ಫೆಬ್ರುವರಿ 2017, 7:36 IST
ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮ ಪಂಚಾಯತಿಯ ನಿರ್ಲಕ್ಷದಿಂದ ಗ್ರಾಮ ಶುದ್ಧ ಕುಡಿಯುವ ನೀರಿನ ಘಟಕ ಒಂದು ತಿಂಗಳಿನಿಂದ ಬಂದ್ ಆಗಿದ್ದು  ಕುಡಿಯುವ ನೀರಿಗಾಗಿ ಜನರು ಬೇರೆ ಗ್ರಾಮಗಳಿಗೆ ಅಲೆದಾಡುತ್ತಿದ್ದಾರೆ.  
 
 ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿತ್ತು. ಆದರೆ ಘಟಕಕ್ಕೆ ಪೂರೈಕೆಯಾಗುತ್ತಿದ್ದ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಕಲುಷಿತ ನೀರು ಬರುತ್ತಿರುವುದರಿಂದ ಘಟಕವನ್ನು ಮುಚ್ಚಲಾಗಿದೆ ಎಂದು ನೀರಿನ ಘಟಕದವರು ಹೇಳುತ್ತಾರೆ. ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳ ಕಡೆ ಕೈ ತೋರುವರು.
 
ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಘಟಕಕ್ಕೆ ಪೂರೈಸುವಂತೆ ಕೋರಿದರೂ ಅಧಿಕಾರಿಗಳು ಸ್ವಂದಿಸುತ್ತಿಲ್ಲ ಎಂದು ದೂರುವರು ಗ್ರಾಮಸ್ಥರು. ಘಟಕಕ್ಕೆ ಬೀಗ ಹಾಕಿರುವ ಕಾರಣ ಕುಡಿಯುವ ನೀರಗಾಗಿ ಜನರು 2 ಕಿಲೋ ಮೀಟರ್ ದೂರದ ನಾದೂರು ಅಥವಾ ರಂಗಾಪುರ ಗ್ರಾಮಗಳಿಗೆ ತೆರಳಬೇಕಾಗಿದೆ.
 
ಕುಸಿದ ನೀರಿನ ಟ್ಯಾಂಕ್
 
ಶಿರಾ: ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ಶುಕ್ರವಾರ ಕುಡಿಯುವ ನೀರು ಸಂಗ್ರಹಣೆಯ ಓವರ್ ಹೆಡ್ ಟ್ಯಾಂಕ್ ಕುಸಿದು ಬಿದ್ದಿದೆ.
ಈ ವೇಳೆ ಟ್ಯಾಂಕ್ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದ ಜಯಮ್ಮ ಭಯದಿಂದ ಹೊರಗೆ ಓಡಿ ಬರುವ ವೇಳೆ ಬಿದ್ದು ಗಾಯಗೊಂಡಿ ದ್ದಾರೆ. ಅವರನ್ನು ಶಿರಾ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

35 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಟ್ಯಾಂಕ್ ಶಿಥಿಲವಾಗಿದ್ದರೂ ಅಧಿಕಾರಿಗಳು ತೆರವಿಗೆ ಮುಂದಾಗಿರಲಿಲ್ಲ. ಗ್ರಾಮ ಪಂಚಾಯಿತಿ ಸಭೆಯಲ್ಲಿ ಟ್ಯಾಂಕ್ ತೆರವುಗೊಳಿಸಿ ಹೊಸ ಟ್ಯಾಂಕ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ನಿರ್ಣಯ ಕೈಗೊಂಡು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷವಹಿಸಿದ್ದರು. ಟ್ಯಾಂಕ್ ಕುಸಿದಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
 
* ಶುದ್ಧ ನೀರಿನ ಘಟಕ ಮುಚ್ಚಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಚರ್ಚಿಸಲಾಗುವುದು. ಈಗಾಗಲೇ ಒಂದು ಕೊಳವೆ ಬಾವಿ ಸಹ ತೆಗೆಸಲಾಗಿದೆ.
-ತಿಮ್ಮರಾಯಪ್ಪ, ಎಇಇ ಗ್ರಾಮೀಣ ಕುಡಿಯುವ ನೀರು ಇಲಾಖೆ
 
* ನಮ್ಮ ಮನೆಯಲ್ಲಿ ನೀರಿನ ತೊಟ್ಟಿ ಇಲ್ಲ. ನೀರಿಗಾಗಿ ಬೀದಿ ನಲ್ಲಿ ನಂಬಿದ್ದೇವೆ. ನೀರು ಬಾರದ ಕಾರಣ ಬಿಂದಿಗೆ ಹಿಡಿದು ಮನೆ ಮನೆಗಳಿಗೆ ಅಲೆಯುವಂತಾಗಿದೆ.
- ಕೆ.ರಾಮಯ್ಯ, ಗ್ರಾಮಸ್ಥರು, ಪಟ್ಟನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.