ADVERTISEMENT

ಪರಿಹಾರಕ್ಕೆ ಒತ್ತಾಯಿಸಿ ಕಾಮಗಾರಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:50 IST
Last Updated 31 ಜನವರಿ 2017, 7:50 IST
ಪರಿಹಾರಕ್ಕೆ ಒತ್ತಾಯಿಸಿ ಕಾಮಗಾರಿಗೆ ಅಡ್ಡಿ
ಪರಿಹಾರಕ್ಕೆ ಒತ್ತಾಯಿಸಿ ಕಾಮಗಾರಿಗೆ ಅಡ್ಡಿ   
ಶಿರಾ: ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ಗ್ರಾಮದಲ್ಲಿ ಸೋಮವಾರ ಕೆಪಿಟಿಸಿಎಲ್ ಅಧಿಕಾರಿಗಳು ನಡೆಸುತ್ತಿದ್ದ ಕಾಮಗಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.
 
ಕೆಪಿಟಿಸಿಎಲ್ 440 ಕೆವಿ ಸಾರ್ಮಥ್ಯದ ಚಿತ್ರದುರ್ಗ ಜಿಲ್ಲೆಯ ರಾಂಪುರದಿಂದ ತುಮಕೂರು ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹಾದು ಪವರ್‌ಲೈನ್ ವಿದ್ಯುತ್‌ಲೈನ್ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೆ, ಪೊಲೀಸರನ್ನು ಉಪಯೋಗಿಸಿಕೊಂಡು ರೈತರ ಮೇಲೆ ಬಲಪ್ರಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆಗೆ ಮುಂದಾದರು. 
 
‘ನಮ್ಮ ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಸರ್ಕಾರದ ಯೋಜನೆಗೆ ನೀಡಿದ್ದೇವೆ. ಆದರೆ ಜಿಲ್ಲಾಧಿಕಾರಿ ಆದೇಶದಂತೆ ಕಾಮಗಾರಿ ಮುಗಿಯುವ ಮುನ್ನ ರೈತರಿಗೆ ಪರಿಹಾರ ಹಣ ನೀಡಬೇಕು. ಆದರೆ ಅರ್ಧ ಹಣ ನೀಡಿ ಮತ್ತೆ ಹಣ ಕೇಳಿದರೆ ಪೊಲೀಸರ ಮೂಲಕ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ರೈತರಾದ ಗೋವಿಂದಪ್ಪ ಮತ್ತು ಜಯಣ್ಣ ಪಟ್ಟು ಹಿಡಿದರು. 
 
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ಪರಿಹಾರ ಕೇಳಿದ ರೈತರ ಮೇಲೆ ಕೆಪಿಟಿಸಿಎಲ್ ಅಧಿಕಾರಗಳು ದೌರ್ಜನ್ಯವೆಸಗುತ್ತಿರುವುದು ಖಂಡನೀಯ. ಜಿಲ್ಲಾಧಿಕಾರಿ ಆದೇಶದ ಪ್ರಕಾರ ತಕ್ಷಣ ಪರಿಹಾರ ನೀಡಬೇಕು ಎಂದರು. 
 
ಬೆಜ್ಜಿಹಳ್ಳಿ, ಲಕ್ಕನಹಳ್ಳಿ, ತಡಕಲೂರು ಗ್ರಾಮಗಳ ರೈತರ ಜಮೀನಿನಲ್ಲಿ ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡಲಾಗಿದೆ ಪ್ರತಿ ಸ್ಥಾವರಕ್ಕೆ ₹ 2.25 ಲಕ್ಷ ಪರಿಹಾರ ನೀಡಿದೆ. ಆದರೆ, ಜಮೀನಲ್ಲಿರುವ ಮಾವು, ಬೇವು ಸೇರಿದಂತೆ ಇತರತೆ ಮರಗಳಿಗೆ ಪರಿಹಾರದ ಬಗ್ಗೆ ತಿಳಿಸಿಲ್ಲ. ಲೈನ್ ಹಾದು ಹೋಗುವ ಪ್ರತಿ ಕುಂಟೆ ಜಮೀನಿಗೆ ₹ 10 ಸಾವಿರ ಮತ್ತು ಪ್ರತಿ ಮರಕ್ಕೆ ಬೆಲೆ ನಿಗದಿ ಮಾಡಲಾಗಿದೆ. ಕಾಮಗಾರಿ ಪೊರ್ಣಗೊಂಡರೆ ರೈತ ಯಾರಿಗೆ ಪರಹಾರ ಕೇಳಬೇಕು. ಆದ್ದರಿಂದ ಈ ಕಾರಿಡಾರ್ ಹಣ ಕೊಡಿ ಆಮೇಲೆ ಕೆಲಸ ಮಾಡಿ ಎಂದರು.
 
ಕೆಪಿಟಿಸಿಎಲ್ ಎಂಜಿನಿಯರ್ ಕೃಷ್ಣಪ್ಪ ಮಾತನಾಡಿ, ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಬಳಸಿರುವ ಜಮೀನಿನ ಪರಿಹಾರ ನೀಡಿದ್ದೇವೆ. ಆದರೆ ಮರ– ಗಿಡಗಳು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸರ್ವೆ ಮಾಡಿಸುತ್ತಿದ್ದು, ಬೆಲೆ ನಿಗದಿಯಾದ ನಂತರ ತಕ್ಷಣ ಪರಿಹಾರ ನೀಡುತ್ತೇವೆ. ನ್ಯಾಯಾಲಯದಲ್ಲಿರುವ ಜಮೀನುಗಳ ವ್ಯಾಜ್ಯ ಮುಗಿದ ಮೇಲೆ ಪರಿಹಾರ ನೀಡುವ ಭರವಸೆ ನೀಡಿದ ನಂತರ ಕಾಮಗಾರಿ ನಡೆಸಲು ರೈತರು ಅವಕಾಶ ಮಾಡಿಕೊಟ್ಟರು. 
 
ಜಿ.ಪಂ ಮಾಜಿ ಉಪಾಧ್ಯಕ್ಷ ಗಡಾರಿ ಹನುಮಂತಪ್ಪ, ರೈತ ಮುಖಂಡರಾದ ಬಸವರಾಜು, ನಾಗರಾಜು, ಪರುಸಪ್ಪ, ಗೋಪಾಲಪ್ಪ,  ಹನುಮಂತರಾಯ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.