ADVERTISEMENT

ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಭಣ ಭಣ

ಕೆಎಸ್ಆರ್‌ಟಿಸಿ ನೌಕರರ ಮುಷ್ಕರ ಯಶಸ್ವಿ, ಖಾಸಗಿ ವಾಹನಗಳ ಮೊರೆ ಹೋದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 9:57 IST
Last Updated 26 ಜುಲೈ 2016, 9:57 IST

ತುಮಕೂರು: ರಾಜ್ಯ ಸಾರಿಗೆ ನಿಗಮದ ನೌಕರರು ಸೋಮವಾರ ಮುಷ್ಕರ ನಡೆಸಿದ್ದರಿಂದ ನಗರ ಸೇರಿ ಜಿಲ್ಲೆ ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ.
ಜಿಲ್ಲೆಯಾದ್ಯಂತ ಸಾರಿಗೆ ನೌಕರರು ಕರ್ತವ್ಯದಿಂದ ದೂರ ಉಳಿಯುವ ಮೂಲಕ ಶಾಂತಯುತ ಪ್ರತಿಭಟನೆ ನಡೆಸಿದರು.  ಎಲ್ಲೂ ಕಲ್ಲು ತೂರಾಟ, ಬಸ್ ತಡೆಯಂತಹ ಘಟನೆಗಳು ನಡೆದಿಲ್ಲ. ಮುಷ್ಕರ ಶಾಂತಿಯುತವಾಗಿತ್ತು.

ಭಾನುವಾರ ಮಧ್ಯಾಹ್ನದಿಂದಲೇ ಜಿಲ್ಲೆಯ ಬಹುತೇಕ ಬಸ್ ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರಾಗಿರಲಿಲ್ಲ.  ಸೋಮವಾರ ನೌಕರರು ಡಿಪೊ, ಬಸ್ ನಿಲ್ದಾಣದತ್ತ ಸುಳಿಯಲಿಲ್ಲ.

ಜಿಲ್ಲೆಯ 7 7 ಡಿಪೊಗಳಿಂದ 2600 ನೌಕರರು ಕೆಲಸ ಮಾಡಲಿಲ್ಲ.   ಕೇವಲ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸಿದರು. ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.  ಮುಷ್ಕರ ನಡೆಸುವುದಾಗಿ ಮೊದಲೇ ಸಾರಿಗೆ ನೌಕರರು ಘೋಷಣೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆಯೂ ಅಷ್ಟೊಂದು ಕಂಡು ಬರಲಿಲ್ಲ. ಅನಿವಾರ್ಯ ಕಾರಣದಿಂದಲೋ, ಅಗತ್ಯ ಕೆಲಸದ ಮೇಲೆ ಹೋಗಲೇಬೇಕೆಂದು ಬಂದ ಪ್ರಯಾಣಿಕರು ಬಸ್‌ಗಳಿಲ್ಲದೇ ಬೆಳಿಗ್ಗೆ ಪರದಾಡಿದರು. ಜಿಲ್ಲೆಯ ತಾಲ್ಲೂಕು ಕೇಂದ್ರ, ಪಕ್ಕದ ಜಿಲ್ಲೆಗಳಿಗೆ, ಬೆಂಗಳೂರಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ತೆರಳಿದರು.

ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ ನೆರವು: ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್‌ಗಳು ಪ್ರಯಾಣಿಕರಿಗೆ ಆಸರೆಯಾದವು. ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಬಸ್‌ಗಳು ಸೋಮವಾರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಅಶೋಕ ರಸ್ತೆ ಬದಿ ಸಾಲುಗಟ್ಟಿ ನಿಂತಿದ್ದವು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಖ್ಯ ದ್ವಾರದ ಬಳಿಯೇ ಖಾಸಗಿ ಬಸ್‌ ನಿಲುಗಡೆಯಾಗಿದ್ದರಿಂದ ಪ್ರಯಾಣಿಕರು ನೇರವಾಗಿ ಖಾಸಗಿ ಬಸ್‌ಗಳತ್ತ ಬಂದು ತೆರಳುತ್ತಿದ್ದದ್ದು ಕಂಡು ಬಂತು.

ಪೊಲೀಸ್ ಭದ್ರತೆ: ತುಮಕೂರು ಬಸ್ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 100ಕ್ಕೂ ಹೆಚ್ಚು ಪೊಲೀಸರು, ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬಸ್ ನಿಲ್ದಾಣದ ಎದುರಿನ ರಸ್ತೆ, ಬಿಜಿಎಸ್ ವೃತ್ತ, ಬಸ್ ಡಿಪೊಗಳಿಗೆ ಪೊಲೀಸ್‌ ಭದ್ರತೆ  ಹಾಕಲಾಗಿತ್ತು.

ಬಸ್‌ಗಳೂ ಇಲ್ಲದೇ ಇರುವುದರಿಂದ ಪ್ರಯಾಣಿಕರ ಸಂಖ್ಯೆಯೂ ತಗ್ಗಿತ್ತು. ಸರ್ಕಾರಿ ಕಚೇರಿಗೆ ಬರುವವರು, ಕಾಲೇಜು ವಿದ್ಯಾರ್ಥಿಗಳಷ್ಟೇ ಹೆಚ್ಚು ಕಂಡರು. ಹನ್ನೊಂದು ಗಂಟೆ ಹೊತ್ತಿಗೆ ಖಾಸಗಿ ಬಸ್‌ಗಳತ್ತಲೂ ಪ್ರಯಾಣಿಕರು ಸುಳಿಯಲಿಲ್ಲ.

ಬೆಳಿಗ್ಗೆ  ಕೆಲ ಕಡೆ ದುಪ್ಪಟ್ಟು ಬೆಲೆ ಯನ್ನು ಆಟೊ ಚಾಲಕರು ಪಡೆದರು. ಇದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ನಂತರ, ಪ್ರಯಾಣಿಕರಿ ಲ್ಲದೇ ಆಟೊಗಳೂ ಖಾಲಿ ಖಾಲಿ ಓಡಾಟ ನಡೆಸಿದವು. ಹೆಚ್ಚಿನ ಬೆಲೆ ಪಡೆದಿಲ್ಲ ಪ್ರಯಾಣಿಕರಿಲ್ಲದೇ ಖಾಲಿ ಹೊಡೆಯು ತ್ತಿವೆ. ಇದು ನಮಗೂ ಲಾಸ್  ಎಂದು ಆಟೋ ಚಾಲಕ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಕೇಂದ್ರದ ಅಕ್ಕಪಕ್ಕದ ಊರಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಖಾಸಗಿ ಬಸ್‌ಗಳಲ್ಲೇ ಬಂದು ಹೋದರು. ನಿತ್ಯ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಬರುವವರು ರೈಲು, ಖಾಸಗಿ ಬಸ್‌ಗಳನ್ನು ಆಶ್ರಯಿಸಿದರು.

ತಾಲ್ಲೂಕುಗಳಲ್ಲೂ ಬಂದ್ ಯಶಸ್ವಿ
ತಿಪಟೂರು, ತುರುವೇಕೆರೆ, ಪಾವಗಡ, ಗುಬ್ಬಿ, ಕುಣಿಗಲ್, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲೂ ಮುಷ್ಕರಕ್ಕೆ ಬೆಂಬಲ ಸಿಕ್ಕಿತು.
ಶಾಲಾ ಕಾಲೇಜುಗಳು ಕೆಲವು ಕಡೆಗಳಲ್ಲಿ ಎಂದಿನಂತೆ ನಡೆದರೆ, ಕೆಲವು ಕಡೆ ಬಂದ್ ಆಗಿತ್ತು. ಶಾಲೆಗಳು ತೆರೆದಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು.
ಖಾಸಗಿ ಬಸ್‌, ಆಟೊ ಇತ್ಯಾದಿ ವಾಹನಗಳನ್ನು ನಾಗರಿಕರು ಸಂಚಾರಕ್ಕೆ ಅವಲಂಬಿಸಿದ್ದರು. ಬಸ್‌ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಬೇಕಿದ್ದ ವಿದ್ಯಾರ್ಥಿಗಳು ಖಾಸಗಿ ಬಸ್ ಮೊರೆ ಹೋಗಿದ್ದರು. ಕೆಲವು ಕಡೆಗಳಲ್ಲಿ ಖಾಸಗಿ ಬಸ್‌ಗಳಿಗೆ ಜನಸಂದಣಿ ಹೆಚ್ಚಿತ್ತು.
ದೂರದ ಪ್ರದೇಶಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿಗೆ ಖಾಸಗಿ ಬಸ್‌ನವರು ಬೇಡಿಕೆ ಇಟ್ಟರು. ಅಲ್ಲದೆ ಕೆಲವು ಕಡೆಗಳಲ್ಲಿ ಆಟೊಗಳವರು ಪ್ರಯಾಣಿಕರ ಜತೆ ದರಕ್ಕೆ ಸಂಬಂಧಿಸಿದಂತೆ ಮಾತಿನ ಚಕ ಮಕಿಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.