ADVERTISEMENT

ಫೇಸ್‌ಬುಕ್‌ನಲ್ಲಿ ಶಿರಾ: ಸಮಸ್ಯೆ ಬಿಂಬಿಸಲು ಆದೀತೆ ವರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 9:43 IST
Last Updated 1 ನವೆಂಬರ್ 2014, 9:43 IST

ಶಿರಾ: ತಾಲ್ಲೂಕಿನಲ್ಲಿಯೂ ಸಾಮಾಜಿಕ ಜಾಲ­ತಾಣ ಫೇಸ್‌ಬುಕ್ ವ್ಯಾಪಕವಾಗಿ ಜನಪ್ರಿಯ­ವಾಗಿದ್ದು, ಬಸ್- ಮತ್ತು ಪತ್ರಿಕೆಗಳು ಬಾರದ ಕುಗ್ರಾಮಗಳಲ್ಲೂ ಹತ್ತಾರು ಜನ ಫೇಸ್‌­ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ.

ವಿದ್ಯಾರ್ಥಿಗಳು, ಯುವಕರು ಮಾತ್ರವಲ್ಲದೆ ರಾಜಕೀಯ ಪಕ್ಷಗಳ ಕಾರ್ಯಕರ್ತರು, ರಾಜ­ಕಾರಣಿಗಳು, ರೈತರು, ಪೊಲೀಸರು ಸೇರಿದಂತೆ ತಾಲ್ಲೂಕಿನ ಎಲ್ಲ ವರ್ಗದ ಜನ ಫೇಸ್‌ಬುಕ್‌ನಲ್ಲಿ ಸಿಗುತ್ತಾರೆ. ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಗಳು ಫೇಸ್ ಬುಕ್ ಮೂಲಕವೂ ಪ್ರಚಾರ ಹಾಗೂ ಮತ ಯಾಚನೆ ಮಾಡಿದ್ದು ಕಂಡುಬಂದಿತ್ತು. ಆದರೆ ಚುನಾವಣೆ ಮುಗಿದ ನಂತರ ಕೆಲ ಅಭ್ಯರ್ಥಿಗಳ ಫೇಸ್‌ಬುಕ್‌ ಪುಟಗಳು ನಿಷ್ಕ್ರಿಯವಾದವು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮತಗಳಿಕೆಯಲ್ಲಿ ನಾಲ್ಕನೇ ಸ್ಥಾನ ಗಳಿ­ಸಿದ ಶಶಿಕುಮಾರ್ ಶಿರಾ ಈಗಲೂ ಫೇಸ್‌­ಬುಕ್‌ನಲ್ಲಿ ಸಕ್ರಿಯರಾಗಿದ್ದು, ಗುಂಡಿ ಬಿದ್ದ ರಸ್ತೆ ಸೇರಿದಂತೆ ಮೂಲಸೌಲಭ್ಯ ಕೊರತೆ ಚಿತ್ರ­ಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಆದರೆ ಪದೇ ಪದೇ ಗುಂಡಿ ಬಿದ್ದ ರಸ್ತೆ ಚಿತ್ರ­ಗಳನ್ನು ಹಾಕಿ ಶಿರಾ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ ಎಂಬ ಸಂದೇಶ ರವಾನೆಯಾಗುವ ಮೂಲಕ ನಮ್ಮ ಸಚಿವರ ಬಗ್ಗೆ ತಪ್ಪು ಅಭಿ­ಪ್ರಾಯ ಮೂಡಿಸುತ್ತಿದ್ದಾರೆ ಎಂದು ಅವರಿಗೆ ಕಾಂಗ್ರೆಸ್  ಕಾರ್ಯಕರ್ತರು ಬೆದರಿಕೆ ಹಾಕಿ­ದ್ದನ್ನು ಒಮ್ಮೆ ಶಶಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಬೇವಿನಹಳ್ಳಿ ನರಸಿಂಹರಾಜು ಎಂಬುವರು ಕೂಡ ಒಮ್ಮೆ ತಮ್ಮ ಊರಿನ ಕುಡಿವ ನೀರಿನ ಸಮಸ್ಯೆ ಬಗ್ಗೆ ಫೇಸ್‌ಬುಕ್‌ನಲ್ಲಿ ಚಿತ್ರ ಸಹಿತ ಹಾಕಿದ್ದರು. ಆದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಿತೋ ಇಲ್ಲವೋ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ತನ್ನ ವಿರುದ್ದ ಗರಂ ಆಗಿದ್ದರು ಎಂದು ತಿಳಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಆರ್.­ಉಮೇಶ್, ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಗೌಡ ಸೇರಿದಂತೆ ಸಾಕಷ್ಟು ಸ್ಥಳೀಯ ಜನಪ್ರತಿನಿಧಿಗಳು ಫೇಸ್‌ಬುಕ್‌ನಲ್ಲಿ ಸಕ್ರಿಯರಾ­ಗಿದ್ದರೂ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಕ್ಕಿಂತ ತಮ್ಮ ಹಾಗೂ ಕುಟುಂಬದ ಪೋಟೋಗಳನ್ನು ಅಪ್‌ಲೋಡ್ ಮಾಡುವುದೇ ಹೆಚ್ಚಾಗಿದೆ.

ಶಿರಾದಲ್ಲಿ ಪೊಲೀಸ್ ಆಗಿದ್ದ ವ್ಯಕ್ತಿಯೊಬ್ಬರು ಪಕ್ಕದ ತಾಲ್ಲೂಕಿಗೆ ವರ್ಗವಾಗಿದ್ದೇ ತಡ ತನ್ನ ಮೇಲಧಿಕಾರಿಯಾಗಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಒಬ್ಬರ ವಿರುದ್ಧ ಅತ್ಯಂತ ಕೀಳಾಗಿ ನಿಂದಿಸಿದ್ದರು. ಕೆಲ ಕಾಲ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರಾಗಿರುವ ಅಜಯ್ ಕುಮಾರ್ ಗಾಳಿ ಹಾಗೂ ಪಟ್ಟನಾಯಕನಹಳ್ಳಿ ಮಧು ತಮ್ಮ ಪಕ್ಷದ ನಾಯಕರ ಪರ ಹೆಚ್ಚು ಸ್ಟೇಟಸ್ ಹಾಕುವ ನಡುವೆಯೂ ಒಮೊಮ್ಮೆ ಉತ್ತಮ ಬರಹ ಹಾಗೂ ಚರ್ಚೆಯ ಮೂಲಕ ಗಮನ ಸೆಳೆಯುತ್ತಾರೆ. ಲೋಕಸಭೆ ಚುನಾ­ವಣೆ­ಯಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಾ­ಧ್ಯಕ್ಷ­ರಾಗಿದ್ದವರೊಬ್ಬರು ತಮ್ಮ ಪಕ್ಷದ ಬಗ್ಗೆ ಬಿಟ್ಟು ಬಿಜೆಪಿಯ ನರೇಂದ್ರ ಮೋದಿಯ  ಪರ ಫೇಸ್‌­ಬುಕ್‌ನಲ್ಲಿ ವಾದಕ್ಕಿಳಿದಿದ್ದು ವಿಚಿತ್ರವಾಗಿತ್ತು.

ಈ ಮಧ್ಯೆ ಶಿರಾ ವಿಶೇಷತೆ ಬಗ್ಗೆ ಅಭಿ­ಮಾ­ನದಿಂದ ಫೇಸ್ ಬುಕ್ ನಲ್ಲಿ ಬರೆಯುವವರು ಒಂದೆಡೆಯಿದ್ದರೇ, ಬೇರೆ ಊರುಗಳಿಗೆ ಮದುವೆ­ಯಾಗಿ ಹೋಗಿರುವ ಮಹಿಳೆಯರು ತಮ್ಮ ತವರಿನ ಪ್ರೀತಿಯನ್ನು ಫೇಸ್ ಬುಕ್ ನಲ್ಲಿ ತೋರಿ­ಸು­ವುದು ಇದೆ. ಅಂತಹವರಲ್ಲಿ ಮೈಸೂರಿ­ನಲ್ಲಿರುವ ಕಾಮಾಕ್ಷಿಗೌಡ ಕೂಡ ಒಬ್ಬರು. ಅವರು ಈಚೆಗೆ ‘ನಮ್ಮ ಸಿರಾ ಕಡೆಯವರು ಮೈಸೂರಿನತ್ತ ಮೇಕೆ ಕುರಿ ಕರೆತರುತ್ತಾರೆ. ನಮ್ಮ ಮನೆ ಏರಿಯಾದಲ್ಲಿ ಕುರಿ ಮೇಯಿಸುವಾಗ ಅವರನ್ನು ಮಾತನಾಡಿಸಿದೆ. ತಮ್ಮದು ಸಿರಾ ಬಳಿಯ ತಾವರೇಕೆರೆ ಅಂತ ಅವರು ಹೇಳಿದರು. ಆ ಕುರಿಗಳನ್ನು ನೋಡಿದ ಕೂಡಲೆ ಸಿರಾ ಕಡೆಯ ಮಾಂಸದೂಟದ ರುಚಿ ನೆನಪಾಯಿತು. ನಮ್ಮ ಮನೆ ಕೆಲಸದಾಕೆ ಬಳಿ ‘ನಮ್ಮ ಕಡೆ ಕುರಿಯ ಮಾಂಸದೂಟ ತುಂಬಾ ರುಚಿ’ ಅಂತ ಹೇಳಿದೆ. ಅದಕ್ಕೆ ಆಕೆ ಹೌದೇನಕ್ಕ ಎಂದೇಳಿ ‘ಮಂಗಳೂರು ಅಂಟಿ ಅಲ್ಲಿಯ ಮೀನು ಬಗ್ಗೆ ನಿಮ್ಮ ಹಾಗೇ ಹೇಳುತ್ತಿರುತ್ತಾರೆ’ ಎಂದಳು.

ಅದಕ್ಕೆ ನಾನು ‘ನೀನು ನಂಜನಗೂಡಿನವಳು ಅಲ್ಲವೇ ಆದ್ದರಿಂದ ನಂಜನಗೂಡಿನ ರಸಬಾಳೆ ಬಗ್ಗೆ ಹೇಳು ಎಂದೆ’ ಎಂಬುದಾಗಿ ಬರೆದಿದ್ದಾರೆ. ಒಟ್ಟಿನಲ್ಲಿ ಫೇಸ್ ಬುಕ್ ನಲ್ಲಿಯೂ ಪ್ರಾದೇಶಿಕ ಅಭಿಮಾನ- ಸ್ವಾಭಿಮಾನ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.