ADVERTISEMENT

ಫ್ಲೆಕ್ಸ್ ಹಾಕಿದರೆ ಕಾನೂನು ಪ್ರಕಾರ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:48 IST
Last Updated 14 ಮಾರ್ಚ್ 2017, 5:48 IST
ಫ್ಲೆಕ್ಸ್ ಹಾಕಿದರೆ ಕಾನೂನು ಪ್ರಕಾರ ಕ್ರಮ
ಫ್ಲೆಕ್ಸ್ ಹಾಕಿದರೆ ಕಾನೂನು ಪ್ರಕಾರ ಕ್ರಮ   

ತುಮಕೂರು: ‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಫ್ಲೆಕ್ಸ್‌ಗಳನ್ನು ಹಾಕಬಾರದು. ಈ ಆದೇಶವನ್ನು ಮಹಾನಗರ ಪಾಲಿಕೆಯು ಕಟ್ಟುನಿಟ್ಟಾಗಿ ಪಾಲನೆ ಮಾಡಲಿದೆ. ನಗರದಲ್ಲಿ ಇನ್ನು ಮುಂದೆ ಯಾರೇ ಫ್ಲೆಕ್ಸ್ ಹಾಕಿದರೂ ಅಂಥವರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಮೇಯರ್ ಎಚ್.ರವಿಕುಮಾರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದೆ. ನಾನು ಮೇಯರ್ ಆಗುತ್ತಿದ್ದಂತೆಯೇ ಕೆಲ ಹಿತೈಷಿಗಳು ಫ್ಲೆಕ್ಸ್ ಹಾಕಿದ್ದರು. ಅವುಗಳನ್ನು ತೆರವುಗೊಳಿಸಲಾಗಿದೆ. ನಗರದ ಪ್ರಮುಖ ರಸ್ತೆಯಲ್ಲಿ ಹಾಕಿರುವ ಎಲ್ಲ ರೀತಿಯ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ಭಾನುವಾರದಿಂದ ಆರಂಭಿಸಲಾಗಿದೆ. ಫೆಕ್ಸ್ ಹಾಕಲು ಪಾಲಿಕೆ ಪರವಾನಗಿ ಕೊಡುವುದೂ ಇಲ್ಲ’ ಎಂದು ವಿವರಿಸಿದರು.

‘ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಚಿತ್ರ ಹಾಕಿ ಕೆಲವರು ಫ್ಲೆಕ್ಸ್ ಹಾಕುತ್ತಾರೆ. ಈ ರೀತಿ ಹಾಕುವುದು ಪರಿಸರಕ್ಕೆ ಹಾನಿಯಾಗಿದೆ. ಹಾಕಬಾರದು ಎಂದು ಭಕ್ತರಿಗೆ ತಿಳಿಸಬೇಕು ಎಂದು ಸ್ವಾಮೀಜಿಯವರನ್ನು ಭೇಟಿ ಮಾಡಿ ಪ್ರಾರ್ಥಿಸಿದ್ದೇನೆ. ಹಾಗೆಯೇ ಯಾವುದೇ ಪಕ್ಷದ ಮುಖಂಡರು, ಗಣ್ಯರ ಚಿತ್ರ ಹಾಕಿದ್ದರೂ ಅಂತಹ ಫ್ಲೆಕ್ಸ್ ತೆರವುಗೊಳಿಸಲಾಗುವುದು. ಸಂಘ ಸಂಸ್ಥೆಗಳೂ ಫ್ಲೆಕ್ಸ್ ಹಾಕಬಾರದು’ ಎಂದು ಹೇಳಿದರು.

ADVERTISEMENT

‘ಫೆಕ್ಸ್ ಹಾಕಿದವರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಷನ್ 19ರ ಅನ್ವಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಎಲ್ಲಿ ಫ್ಲೆಕ್ಸ್ ಹಾಕಿರುತ್ತಾರೊ ಆ ಪ್ರದೇಶದ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು. ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಫ್ಲೆಕ್ಸ್ ಹಾಕಿದ್ದು ಗಮನಕ್ಕೆ ಬಂದಿದೆ. ತೆರವುಗೊಳಿಸಲಾಗುವುದು. ಪಕ್ಷ, ಸಂಘ ಸಂಸ್ಥೆ ಎಂತಿಲ್ಲ. ಯಾರೇ ಹಾಕಿದ್ದರೂ ತೆರವು ಮಾಡುತ್ತೇವೆ’ ಎಂದು ತಿಳಿಸಿದರು.

ಬಟ್ಟೆ ಬ್ಯಾನರ್ ಹಾಕಬಹುದು: ‘ಬಟ್ಟೆ ಬ್ಯಾನರ್ ಹಾಕಲು ಅಭ್ಯಂತರವಿಲ್ಲ. ಅದರಿಂದ ಪರಿಸರಕ್ಕೇನೂ ಧಕ್ಕೆ ಆಗುವುದಿಲ್ಲ. ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಬ್ಯಾನರ್ ಹಾಕಬಹುದು’ ಎಂದು ಸ್ಪಷ್ಟಪಡಿಸಿದರು.

ನೀರಿನ ಸಮಸ್ಯೆಗೆ ಪರಿಹಾರ: ‘ನಗರದಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಬುಗುಡನಹಳ್ಳಿ ಕೆರೆಯಲ್ಲಿನ ನೀರು 15– 20 ದಿನಕ್ಕೆ ಆಗಬಹುದು. ಮೈದಾಳ ಕೆರೆಯಿಂದ ನಗರದ 7– 8 ವಾರ್ಡ್‌ಗಳಿಗೆ ಎರಡೂವರೆ ತಿಂಗಳು ಕೊಡಬಹುದು. ಮೈದಾಳ ಕೆರೆಯಲ್ಲಿ ಐದೂವರೆ ಅಡಿ ನೀರಿದೆ. ತುಮಕೂರು ನಗರ ಮತ್ತು ಮೈದಾಳ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ಎರಡೂವರೆ ತಿಂಗಳು ನೀರು ಬಳಸಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ಮೈದಾಳ ಕೆರೆಯಿಂದ ನಾಲ್ಕಾರು ದಿನಗಳಲ್ಲಿ ನೀರು ಪೂರೈಸಲಾಗುತ್ತದೆ. ಪೈಪ್‌ ಲೈನ್ ಕಾಮಗಾರಿಯಲ್ಲಿ ಎರಡು ಕಡೆ ಅಡಚಣೆ ಇದ್ದುದರಿಂದ ವಿಳಂಬವಾಗಿದೆ’ ಎಂದು ತಿಳಿಸಿದರು.

ಸಿವಿಲ್ ಕಾಮಗಾರಿಯಲ್ಲಿ ಲೂಟಿ: ‘ಅಜಗೊಂಡನಹಳ್ಳಿಯಲ್ಲಿರುವ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯ ನಿರ್ವಹಣೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ನಗರದಿಂದ ಸಾಗಿಸಿದ ಕಸ ಹಾಗೆಯೇ ಹಾಕಲಾಗುತ್ತಿದೆ. ಬೆಂಗಳೂರು ಮೂಲದ ಗುತ್ತಿಗೆದಾರರು ಇದನ್ನು ನಿರ್ವಹಿಸುತ್ತಿದ್ದಾರೆ’ ಎಂದರು.

‘ತ್ಯಾಜ್ಯ ನಿರ್ವಹಣಾ ಘಟಕದಲ್ಲಿನ ಸಿವಿಲ್ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಸರ್ಕಾರದ ₹ 3 ಕೋಟಿ ಲೂಟಿ ಹೊಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

**

ತಿಂಗಳಲ್ಲಿ ಪಾಲಿಕೆ ಆಡಳಿತ ಸುಧಾರಣೆ

‘ಒಂದು ತಿಂಗಳಲ್ಲಿಯೇ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಸುಧಾರಣೆ ತರಲಾಗುವುದು. ಆಯುಕ್ತರಿಂದ ಹಿಡಿದು ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳೆಲ್ಲರೂ ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮೇಯರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.