ADVERTISEMENT

ಬಡ ಜನರಿಗೆ ಸನ್ಯಾಸಿಯ ನೀರಿನ ಕಾಯಕ!

ಪಾವಗಡದಲ್ಲೊಂದು ಮಾನವೀಯ ಕೆಲಸ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:48 IST
Last Updated 22 ಮಾರ್ಚ್ 2017, 5:48 IST

ಪಾವಗಡ: ಸರ್ಕಾರ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ್ಕೂ ಹಣ ಹಾಕದಿದ್ದರೆ ನೀರು ಬರುವುದಿಲ್ಲ. ಪ್ರತಿ ದಿನ ಹಣಕೊಟ್ಟು ನೀರು ಕೊಳ್ಳಲಾಗದ ನಿಸ್ಸಾಯಕರು, ಕಡು ಬಡವರು ಶುದ್ಧ ಕುಡಿಯುವ ನೀರು ಕೊಳ್ಳಲು ಎಲ್ಲಿಗೆ ಹೋಗಬೇಕು?

ಪಾವಗಡದ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ  ಬಡವರಿಗೆ ನೀರು ಕೊಡುವ ಮಾನವೀಯತೆ ಮರೆಯುತ್ತಿದ್ದಾರೆ.  5 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದಾರೆ.  ಇನ್ಫೊಸಿಸ್‌ ಸಹಯೋಗದೊಂದಿಗೆ ಪ್ರತಿ ನಿತ್ಯ ಪಟ್ಟಣದ ಕನುಮಲಚೆರುವು, ಆಪ್ ಬಂಡೆ, ಕುಮಾರಸ್ವಾಮಿ ಬಡಾವಣೆ  ಮತ್ತಿತರ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಪಾವನಗಂಗ: ತಾಲ್ಲೂಕಿನ ಶಾಲಾ, ಕಾಲೇಜುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಇದು ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದೆ. ಹೀಗಾಗಿ ಪಾವನಗಂಗಾ ಯೋಜನೆ ಮೂಲಕ  ಶಾಲಾ, ಕಾಲೇಜುಗಳ ಆವರಣದಲ್ಲಿ ಕೊಳವೆ ಬಾವಿ ಕೊರೆಸಿ, ಶುದ್ಧೀಕರಣ ಘಟಕ ಅಳವಡಿಸುವ ಕಾರ್ಯಕ್ಕೆ  ಜಪಾನಂದ ಜಿ ಮುಂದಾಗಿದ್ದಾರೆ. 

ಯೋಜನೆಯಡಿ ಕೆಂಚಗಾನಹಳ್ಳಿ ಗೊಲ್ಲರಹಟ್ಟಿ, ಪಟ್ಟಣದ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಸರ್ಕಾರಿ ಪಿಯು  ಕಾಲೇಜು ಸಂಕೀರ್ಣ, ವೈ.ಎನ್.ಹೊಸಕೋಟೆಯ  ಪ್ರಿಯದರ್ಶಿನಿ ಶಾಳೆಗಳಲ್ಲಿ ಶುದ್ಧೀಕರಣ ಘಟಕ ಅಳವಡಿಸಲು ಸಿದ್ಧತೆ ನಡೆಸಲಾಗಿದೆ.

ವಿದ್ಯಾರ್ಥಿಗಳು, ಸಾರ್ವಜನಿಕರ ಒತ್ತಾಯದ ಮೇರೆಗೆ ತುಮಕೂರಿನ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಈಗಾಗಲೇ ಪಾವನ ಗಂಗಾ ಅಡಿ ಕೊಳವೆ ಬಾವಿ ಕೊರೆಸಲಾಗಿದೆ. ಶುದ್ಧೀಕರಣ ಘಟಕ ಅಳವಡಿಸಿ, ವಾರದೊಳಗಾಗಿ ಘಟಕವನ್ನು ಉದ್ಘಾಟಿಸಲಾಗುವುದು ಎಂದು  ಜಪಾನಂದ ಜಿ ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಏಪ್ರಿಲ್-15ರೊಳಗಾಗಿ  ಪಾವನ ಗಂಗಾ ಯೋಜನೆಯಡಿ ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಟ್ಯಾಂಕರ್ ಗಳನ್ನು ಖರೀದಿಸಿ ಕುಡಿಯುವ ನೀರನ್ನು ಪೂರೈಸುವುದಾಗಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.