ADVERTISEMENT

ಬಳಕೆಯಾಗದ ಓವರ್ ಹೆಡ್ ಟ್ಯಾಂಕ್

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಟ್ಯಾಂಕ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:06 IST
Last Updated 8 ಮಾರ್ಚ್ 2017, 10:06 IST

ಹುಳಿಯಾರು: ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿ ವರ್ಷಗಳೇ ಉರುಳಿದರೂ ಬಳಕೆಯಾಗದೆ ಓವರ್ ಹೆಡ್ ಟ್ಯಾಂಕ್ ಹಾಳಾಗುತ್ತಿದೆ ಎಂದು ಹೋಬಳಿಯ ಯಗಚಿಹಳ್ಳಿ ಗ್ರಾಮದ ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ.

ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಗಚಿಹಳ್ಳಿ ಗ್ರಾಮಸ್ಥರ ಕುಡಿಯುವ ನೀರಿನ ವ್ಯವಸ್ಥೆಯಾಗಿ ಕಳೆದ 2 ವರ್ಷಗಳ ಹಿಂದೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಗ್ರಾಮದಲ್ಲಿ ನೀರು ಹರಿಸಲು ಮಾಡಿರುವ ಪೈಪ್ ಲೈನ್ ಕಾಮಗಾರಿ ಸಹ ನಡೆದಿತ್ತು. ಆದರೆ ಟ್ಯಾಂಕ್‌ಗೆ ನೀರು ತುಂಬಿಸದೆ ಹಾಗೆಯೇ ಉಳಿದಿದೆ.

ಹೆಸರಿಗೆ ಮಾತ್ರ ಓವರ್ ಹೆಡ್ ಟ್ಯಾಂಕ್ ಇದೆ. ಆದರೆ ನೀರು ಮಾತ್ರ ಇಲ್ಲ ಎಂಬಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ. ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕೇಳಿದರೆ ನಾನು ಈ ಹಿಂದೆಯೆ ಗ್ರಾಮ ಪಂಚಾಯಿತಿ ಸುಪರ್ದಿಗೆ ನೀಡಿದ್ದೇನೆ ಎನ್ನುತ್ತಾರೆ.

ಓವರ್ ಹೆಡ್ ಟ್ಯಾಂಕ್ ಅನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಕೊಟ್ಟಿರುವ ಯಾವುದೇ ಮಾಹಿತಿ ಕಚೇರಿಯಲ್ಲಿ ಲಭ್ಯವಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು.

ಕಾಮಗಾರಿ ನಿರ್ಮಾಣದ ತನಿಖಾಧಿಕಾರಿ ಎಂಜಿನಿಯರ್ ಕೂಡ ಬಳಕೆ ಮಾಡಿಕೊಡುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಗತ್ಯ ನೀರಿನ ಲಭ್ಯತೆ ನೋಡಿಕೊಂಡು ಓವರ್ ಟ್ಯಾಂಕ್ ತುಂಬಿಸುವ ಕೆಲಸ ಇದುವರೆಗೂ ಆಗಿಲ್ಲ. ಒಟ್ಟಾರೆ ಕಾಮಗಾರಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಗೊಂದಲದಲ್ಲಿ ಗ್ರಾಮಸ್ಥರು ಸೌಲಭ್ಯವಿದ್ದರೂ ಬಳಕೆಗಿಲ್ಲದೆ ವಂಚಿತರಾಗುತ್ತಿದ್ದಾರೆ. ಕೂಡಲೇ ಬಳಕೆಗೆ ಇರುವ ತೊಂದರೆಗಳನ್ನು ಪರಿಹರಿಸಿ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವಂತೆ ಕೆಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT