ADVERTISEMENT

ಬಿಜವರ ಕೆರೆ ತುಂಬಿಸಲು ಆಗ್ರಹ

ಕೊಡಿಗೇನಹಳ್ಳಿ, ಪುರವರ, ಐ.ಡಿ.ಹಳ್ಳಿ ಜನರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 4:50 IST
Last Updated 19 ಜನವರಿ 2017, 4:50 IST
ಬಿಜವರ ಕೆರೆ ತುಂಬಿಸಲು ಆಗ್ರಹ
ಬಿಜವರ ಕೆರೆ ತುಂಬಿಸಲು ಆಗ್ರಹ   

ಕೊಡಿಗೇನಹಳ್ಳಿ: ಮಧುಗಿರಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಬಿಜವರ ಕೆರೆ ತಾಲ್ಲೂಕಿನಲ್ಲಿ ರೈತರ ಜೀವನಾಡಿ ಎಂದು ಖ್ಯಾತಿ ಪಡೆದಿದೆ. ರಾಜ ಚಿಕ್ಕಪ್ಪಗೌಡ ನಿರ್ಮಿಸಿದ 691 ಎಕರೆ ವಿಸ್ತೀರ್ಣವುಳ್ಳ ಈ ಕೆರೆ ಸುತ್ತಮುತ್ತಲಿನ ಹಳ್ಳಿಗಳ ರೈತರ ಪಾಲಿಗೆ ವರದಾನವಾಗಿದೆ.

ಕೆರೆ ತುಂಬಿದರೆ ಹತ್ತಾರು ಕಿಲೋಮೀಟರ್ ದೂರದ ಗ್ರಾಮಗಳ ಅಂತರ್ಜಲ ವೃದ್ಧಿಯಾಗುತ್ತದೆ. ಆದರೆ ಈಗ ಮಳೆ ಇಲ್ಲದ ಕಾರಣ ಕೆರೆಯಲ್ಲಿ ನೀರಿಲ್ಲ. ಇದರಿಂದ ರೈತರ ಕೃಷಿ ಬದುಕಿಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.

ಬಿಜವರ ಕೆರೆ ತುಂಬಿದರೆ ಕೊಡಿಗೇನಹಳ್ಳಿ, ಪುರವರ, ಐ.ಡಿ.ಹಳ್ಳಿ ಹೋಬಳಿಗಳ ಜನರು ಮತ್ತು ಆಂಧ್ರಪ್ರದೇಶದ ಹಿಂದೂಪುರದ ಸುತ್ತಮುತ್ತಲಿನ ಗ್ರಾಮಸ್ಥರು ಸಂಭ್ರಮಿಸುವರು. ಈ ಕೆರೆ ಎತ್ತರದ ಪ್ರದೇಶದಲ್ಲಿದ್ದು ಈ ಭಾಗದ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಅಂತರ್ಜಲ ವೃದ್ಧಿಯಾಗುತ್ತದೆ.

ಕೃಷಿ ಚಟುವಟಿಕೆಗಳು ಉತ್ತಮಗೊಳ್ಳುತ್ತವೆ. ಬಿಜವರ ಕೆರೆ ನೀರಿಲ್ಲದೆ ಭಣಗುಡುತ್ತಿರುವುದರಿಂದ ಇಲ್ಲಿನ ರೈತರು ಆತಂಕಗೊಂಡಿದ್ದು ಹೇಮಾವತಿ ಇಲ್ಲವೆ ಎತ್ತಿನ ಹೊಳೆ ಯೋಜನೆ ಮೂಲಕ ಕೆರೆಗೆ ನೀರು ಹರಿಸುವಂತೆ ಕೋರುತ್ತಿದ್ದಾರೆ. ಕೆರೆ ಶಾಶ್ವತವಾಗಿ ತುಂಬಿದ್ದರೆ ರೈತರಿಗೆ ವರವಾಗುತ್ತದೆ ಎಂದು ತಿಳಿಸಿದ್ದಾರೆ. ಮಧುಗಿರಿ ತಾಲ್ಲೂಕಿನ ಜಯಮಂಗಲಿ ನದಿಯಲ್ಲಿಯೂ ನೀರಿಲ್ಲದೆ ಜನರನ್ನು ಮತ್ತಷ್ಟು ಕಂಗೆಡಿಸಿದೆ.

ಬಿಜವರದ ಕೆರೆ ತುಂಬಿದರೆ ಹಿಂದೂಪುರ ಬಳಿಯ ಲೇಪಾಕ್ಷಿ ಗ್ರಾಮದ ಬಾವಿಗಳಲ್ಲಿಯೂ ನೀರು ತುಳುಕುತ್ತವೆ ಎಂದು ಹಿಂದೂಪುರದ ಆದಿನಾರಾಯಣಪ್ಪ ತಿಳಿಸುವರು. 2015ರಲ್ಲಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಕಳೆದ ವರ್ಷ ಮಳೆ ಬಾರದೆ ಕಾರಣ ಕೆರೆ ಒಣಗಿದೆ. ಕೆರೆ ತುಂಬಿಸಿದರೆ ಈ ಭಾಗದ ರೈತರು ನೆಮ್ಮದಿಯಿಂದ ಬದುಕುವರು. ಆದ್ದರಿಂದ ಜನ ಪ್ರತಿನಿಧಿಗಳು ಕೆರೆಗೆ ನೀರು ಹರಿಸುವ ಬಗ್ಗೆ ಆಲೋಚಿಸಬೇಕು ಎಂದು ಮನವಿ ಮಾಡುತ್ತಾರೆ.

‘ಬಿಜವರದ ಕೆರೆ ತುಂಬಿದರೆ ಇಲ್ಲ ಜಯಮಂಗಲಿ ನದಿ ಹರಿದರೆ ಧೈರ್ಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸಿದರೆ ಮಾತ್ರ ರೈತರಿಗೆ ಉಳಿಗಾಲ’ ಎನ್ನುವರು ಸುದ್ದೇಕುಂಟೆ ಗ್ರಾಮದ ತಿಪ್ಪೇಹನುಮಯ್ಯ.

*
ಕೆರೆ ತುಂಬಿದರೆ 4 ವರ್ಷ ಕೊಳವೆ ಬಾವಿಗಳಲ್ಲಿ ಸಮೃದ್ಧವಾಗಿ ನೀರು ಬರುತ್ತದೆ. ಕಳೆದ ವರ್ಷ ಕೆರೆ ಕೋಡಿ ಬಿದ್ದಾಗ ಹಿಂದೂಪುರದ ಸುತ್ತಮುತ್ತಲ ಗ್ರಾಮಸ್ಥರೂ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು.
-ಬಿ.ಸಿ.ಮಂಜುನಾಥ್, ಬಿಜವರ ಗ್ರಾಮಸ್ಥ

*
ಎತ್ತಿನಹೊಳೆ ಯೋಜನೆಯಿಂದ ನೀರು ತಂದು ತುಂಬಾಡಿ ಬಳಿ ಸಂಗ್ರಹಿಸಿ ಅಲ್ಲಿಂದ ಮಧುಗಿರಿ ತಾಲ್ಲೂಕಿನ 45 ಕೆರೆಗಳನ್ನು ತುಂಬಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ.
-ಆರ್. ಆನಂದಪ್ಪ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.