ADVERTISEMENT

ಬಿಜೆಪಿಗೆ ಒಲಿದ ಅಧಿಕಾರ

ನಾಮಪತ್ರ ಸಲ್ಲಿಸದ ಜೆಡಿಎಸ್ ಸದಸ್ಯರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:42 IST
Last Updated 31 ಜನವರಿ 2017, 7:42 IST
ಬಿಜೆಪಿಗೆ ಒಲಿದ ಅಧಿಕಾರ
ಬಿಜೆಪಿಗೆ ಒಲಿದ ಅಧಿಕಾರ   
ಕುಣಿಗಲ್: ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ  ಜೆಡಿಎಸ್ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ. ಬಿಜೆಪಿ ಬಿ.ಆರ್.ದಿನೇಶ್ ಕುಮಾರ್ ಅವಿರೋಧ ಆಯ್ಕೆಯಾದ ಘಟನೆ ಸೋಮವಾರ ನಡೆಯಿತು.
 
ಜೆಡಿಎಸ್ 10, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 5 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್‌ನ ಹರೀಶ ನಾಯಕ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ.
2016ರ ಆಗಸ್ಟ್‌ನಲ್ಲಿ  ವಿವಿಧ ಸ್ಥಾಯಿ ಸಮಿತಿ ಚುನಾವಣೆ ನಡೆದು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಕೆಂಪರಾಜಶ್ರೀ ಆಯ್ಕೆಯಾಗಿದ್ದರು. ಆಯ್ಕೆಯನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು  ನ್ಯಾಯಾಲಯದ ಮೊರೆ ಹೋಗಿದ್ದರು.
 
ನ್ಯಾಯಾಲಯದ ಆದೇಶದ ಮೇರೆಗೆ ವಿಚಾರಣೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆಂಪರಾಜಶ್ರೀ ಆಯ್ಕೆಯನ್ನು ಅಸಿಂಧುಗೊಳಿಸಿ, ವಿವಿಧ ಸ್ಥಾಯಿ ಸಮಿತಿ ರಚನೆಗೆ ಸೂಚನೆ ನೀಡಿದ್ದರು.
 
ಜನವರಿ 24ರಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್‌ಗೌಡ ಅವರು ವಿವಿಧ ಸ್ಥಾಯಿ ಸಮಿತಿ ರಚನೆಗೆ ಸಭೆ ನಡೆಸಿದ್ದರು.
 
ಅಧಿಕಾರಕ್ಕಾಗಿ ಮೂರು ಪಕ್ಷದ ಸದಸ್ಯರು ರಂಪಾಟ ನಡೆಸಿ ಒಮ್ಮತಕ್ಕೆ ಬಾರದ ಕಾರಣ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಆಗ ಜೆಡಿಎಸ್‌ನ ಕೆಂಪರಾಜಶ್ರೀ, ಕೃಷ್ಣ ಹಾಗೂ ನಾಗಮ್ಮ, ಬಿಜೆಪಿ ಕೆ.ಎಸ್.ಬಲರಾಂ, ದಿನೇಶ್ ಕುಮಾರ್ ಹಾಗೂ ಆಶಾ ಆಯ್ಕೆಯಾದರು.
 
ಕಾಂಗ್ರೆಸ್ ಅದೃಷ್ಟ ಕೈಕೊಟ್ಟಿತ್ತು. ಸಂಜೆಯಾದರೂ ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿ ನಿರ್ಣಯವಾಗದ ಕಾರಣ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಸೋಮವಾರ ಬೆಳಿಗ್ಗೆ ಸಾಮಾಜಿಕ ನ್ಯಾಯ ಸಮಿತಿ ಸದಸ್ಯರು ಬರುತ್ತಿದ್ದಂತೆ ಸಭೆ ನಡೆಸಲಾಯಿತು. 
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ನಾಯಕ್ ಸಭೆಗೆ ಬಂದಿದ್ದಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್‌ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಜೆಡಿಎಸ್ ಸದಸ್ಯರಾದ ನಾಗಮ್ಮ, ಕೃಷ್ಣ ಅವರು ಹರೀಶ್ ನಾಯಕ್ ಬೆಂಬಲಕ್ಕೆ ನಿಂತು ಅಧಿಕಾರಿಗಳ ವಿರುದ್ಧ ಹರಿ ಹಾಯ್ದರು.
 
ಈ ಗಲಾಟೆಯ ನಡುವೆಯೇ ಬಿಜೆಪಿ ಸದಸ್ಯ ದಿನೇಶ್ ಕುಮಾರ್ ನಾಮಪತ್ರ ಸಲ್ಲಿಸಿದರು. ಸಮಯ 11.30 ಕಳೆದರೂ ಬೇರೆಯವರು ನಾಮಪತ್ರ ಸಲ್ಲಿಸದೆ ಕಾಲಹರಣ ಮಾಡಿದರು. ಅಂತಿಮ ಗಳಿಗೆಯಲ್ಲಿ ನಾಗಮ್ಮ  ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳು ಸಮಯ ಮೀರಿದೆ ಎಂದು ತಿರಸ್ಕರಿಸಿದರು.  ದಿನೇಶ್‌ ಕುಮಾರ್ ಅವರ ಅವಿರೋಧ ಆಯ್ಕೆ ಘೋಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.