ADVERTISEMENT

ಬೆಳೆ ನಷ್ಟ: ರೈತರಿಗೆ ₹ 21 ಕೋಟಿ ವಿಮೆ ಹಣ

ರೈತರ ಕೈ ಹಿಡಿದ ಫಸಲ್ ಬಿಮಾ ಯೋಜನೆ, ವಿಮೆ ಮಾಡಿಸದ ಲಕ್ಷಾಂತರ ಮಂದಿ ಪರಿಹಾರದಿಂದ ವಂಚಿತ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:08 IST
Last Updated 25 ಮೇ 2017, 5:08 IST

ತುಮಕೂರು: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಹಣ ಬಿಡುಗಡೆಯಾಗಿದ್ದು, ಜಿಲ್ಲೆಗೆ ₹ 21.12 ಕೋಟಿ ಬಂದಿದೆ. ರಾಷ್ಟ್ರೀಯ ಕೃಷಿ ವಿಮೆ ಯೋಜನೆ (ಎನ್‌ಎಐಎಸ್‌) ಮತ್ತು ‘ಸುಧಾರಿತ ಎನ್‌ಎಐಎಸ್‌’ ಯೋಜನೆಗಳಿಗೆ ಬದಲಾಗಿ ಕೇಂದ್ರ ಸರ್ಕಾರವು ಕಳೆದ  ವರ್ಷ ಹೊಸದಾಗಿ ಫಸಲ್‌ ಬಿಮಾ ಯೋಜನೆಯನ್ನು ಜಾರಿಗೊಳಿಸಿತ್ತು.

ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಈ ವಿಮೆ ಯೋಜನೆಯ ಪ್ರಯೋಜನ ಪಡೆಯಬಹುದಾಗಿತ್ತು. ಜಿಲ್ಲೆಯಲ್ಲಿ 1.75 ಲಕ್ಷ ರೈತರು  ಬೆಳೆ ಸಾಲ ಪಡೆದಿದ್ದರೂ ಕೇವಲ 26 ಸಾವಿರ ರೈತರು ಮಾತ್ರ ವಿಮೆ ಮಾಡಿಸಿದ್ದರು.

‘ಕೃಷಿ ಇಲಾಖೆಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಸಹಕರಿಸುತ್ತಿಲ್ಲ. ಎಲ್ಲ ರೈತರು ಬೆಳೆ ವಿಮೆ ಮಾಡಿಸುವಂತೆ ನೋಡಿಕೊಳ್ಳಬೇಕು’ ಎಂದು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಅವರು ಯೋಜನೆಯ ಪ್ರಗತಿ ಪರಿಶೀಲನೆ ಸಭೆ ವೇಳೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದಾಗ್ಯೂ, ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ.

‘ಜುಲೈ ತಿಂಗಳಲ್ಲಿ ವಿಮೆ ನೋಂದಣಿಗೆ ಕಡೆಯ ಎರಡು ದಿನಗಳು ಇದ್ದಾಗಲೂ ಕೇವಲ 8113 ರೈತರು ವಿಮೆ ಮಾಡಿಸಿದ್ದರು. ಕಂತು ಕಟ್ಟುವ ಅವಧಿ ವಿಸ್ತರಿಸಿದ ಬಳಿಕ ರೈತರ ಮನವೊಲಿಸಿ 26 ಸಾವಿರ ಮಂದಿಗೆ ವಿಮೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೆವು’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ವಿಮೆ ಹಣ ಬಂದಿಲ್ಲ ಎಂದು ಪ್ರತಿ ವರ್ಷ ರೈತರು ದೂರು ಹೇಳುತ್ತಿದ್ದರು. ಆದರೆ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ವಿಮೆ ಹಣ ಕೈಸೇರಿದೆ. ಹೀಗಾಗಿ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ’ ಎಂದು ರೈತ  ಜಯಪ್ರಕಾಶ್‌ ತಿಳಿಸಿದರು.

ಕೇವಲ 83 ರೈತರಿಂದ ವಿಮೆ!
ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವ ರೈತರ ಸಂಖ್ಯೆಯನ್ನು ಗಮನಿಸಿದರೆ ಯೋಜನೆಯ ಲಾಭವನ್ನು ಜಿಲ್ಲೆ ಸರಿಯಾಗಿ ಬಳಸಿಕೊಂಡಿಲ್ಲ ಎಂಬುದು ತಿಳಿದುಬರುತ್ತದೆ.

‘ಭೀಕರ ಬರದ ಕಾರಣ ಲಕ್ಷಾಂತರ ಹೆಕ್ಟೇರ್‌ ಬೆಳೆ ನಾಶವಾಗಿತ್ತು. ಬೆಳೆ ನಷ್ಟಗೊಂಡಿರುವ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲಾಗುತ್ತಿದೆ. ಆದರೆ ಈ ಸಬ್ಸಿಡಿ ಹಣ ಮೂರು–ನಾಲ್ಕು ಸಾವಿರ ಮೀರಿಲ್ಲ. ಒಂದು ವೇಳೆ ರೈತರು ವಿಮೆ ಮಾಡಿಸಿದ್ದರೆ  ಮತ್ತಷ್ಟು ಹಣ ಬರುತ್ತಿತ್ತು’ ಎಂದು ವಿಶ್ಲೇಷಿಸಲಾಗುತ್ತಿದೆ.

ಕುಣಿಗಲ್ ತಾಲ್ಲೂಕಿನಲ್ಲಿ ಕೇವಲ 83 ರೈತರು ವಿಮೆ ಮಾಡಿಸಿದ್ದಾರೆ. ತುಮಕೂರು ತಾಲ್ಲೂಕಿನ ಸ್ಥಿತಿಯೂ ಇದೇ ಆಗಿದೆ. ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ ಮಾತ್ರ ಮುಂದಿವೆ. ಆದರೆ ಯಾವ ತಾಲ್ಲೂಕಿನಲ್ಲೂ ವಿಮೆ ಮಾಡಿಸಿದವರ ಸಂಖ್ಯೆ 5 ಸಾವಿರ ಮೀರಿಲ್ಲ.

*
‘ಈಗಾಗಲೇ 20 ಸಾವಿರ ರೈತರಿಗೆ ಪರಿಹಾರ ಮೊತ್ತವನ್ನು ನೀಡಲಾಗಿದೆ. ಇನ್ನೂ 6 ಸಾವಿರ ಮಂದಿಗೆ ನೀಡಬೇಕಾಗಿದೆ.  ಕೆಲವೇ ದಿನಗಳಲ್ಲಿ ಇವರಿಗೂ ಪರಿಹಾರ ಸಿಗಲಿದೆ’.
-ರೂಪಾದೇವಿ, ಪ್ರಭಾರ ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.