ADVERTISEMENT

ಮಧುಗಿರಿ: ಭೂ ಸ್ವಾಧೀನಕ್ಕೆ ನಿರ್ಧಾರ

ತ್ಯಾಜ್ಯ ವಿಲೇವಾರಿ: ರೈಲಿನಲ್ಲಿ ಕಸದ ಸಾಗಾಟ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 4:45 IST
Last Updated 19 ಜನವರಿ 2017, 4:45 IST
ಮಧುಗಿರಿ: ಭೂ ಸ್ವಾಧೀನಕ್ಕೆ ನಿರ್ಧಾರ
ಮಧುಗಿರಿ: ಭೂ ಸ್ವಾಧೀನಕ್ಕೆ ನಿರ್ಧಾರ   

ಬೆಂಗಳೂರು: ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ವಿಲೇವಾರಿಗಾಗಿ ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ಕೋಲಾರ ಜಿಲ್ಲೆಯ ಚಿನ್ನದ ಗಣಿ ಪ್ರದೇಶದಲ್ಲಿ ತಲಾ ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಸ್ಥಳಗಳಿಗೆ ನಗರದಿಂದ ರೈಲಿನಲ್ಲಿ ಕಸ ಸಾಗಾಟ ಮಾಡಲಾಗುತ್ತದೆ.

ತ್ಯಾಜ್ಯದ ಸಂಸ್ಕರಣೆಗೆ ಬೇಕಾದ ಎಲ್ಲ ಸೌಕರ್ಯ ಒಂದೇ ಕಡೆ ಲಭ್ಯವಾಗುವಂತೆ ಎರಡೂ ಪ್ರದೇಶಗಳಲ್ಲಿ ‘ಪರಿಸರ ಸೌಲಭ್ಯ ನಗರ’ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಅಲ್ಲಿ ಕಸದಿಂದ ವಿದ್ಯುತ್‌, ಜೈವಿಕ ಅನಿಲ ಹಾಗೂ ಗೊಬ್ಬರ ಉತ್ಪಾದಿಸುವ ಸೌಲಭ್ಯ ಒದಗಿಸಲಾಗುತ್ತದೆ.

ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಕೆಂಚೇಗೌಡ ‘ಪ್ರಜಾವಾಣಿ’ಗೆ ಈ ಮಾಹಿತಿ ನೀಡಿದರು. ‘ಕೆಸಿಡಿಸಿ ಸುಪರ್ದಿಯಲ್ಲಿ ಸದ್ಯ ಕೂಡ್ಲು ಘಟಕವಷ್ಟೇ ಇದ್ದು, ಮುಂದಿನ ದಿನಗಳಲ್ಲಿ ಇನ್ನೆರಡು ಘಟಕಗಳು ಸೇರ್ಪಡೆಯಾಗಲಿವೆ’ ಎಂದು ಹೇಳಿದರು.

‘ಸ್ಥಳ ಗುರುತಿಸುವ ಕಾರ್ಯ ಬಹುತೇಕ ಮುಗಿದಿದೆ. ಅಗತ್ಯ ಪ್ರಮಾಣದ ಭೂಮಿ ಎರಡೂ ಕಡೆಗಳಲ್ಲಿ ಲಭ್ಯವಿದ್ದು, ಆ ಪ್ರದೇಶಗಳಲ್ಲಿ ಕಸ ಸಂಸ್ಕರಣೆಗಾಗಿ ತಲಾ 25 ಎಕರೆ ಭೂಮಿಮೀಸಲು ಇಡಲಿದ್ದೇವೆ’ ಎಂದು ವಿವರಿಸಿದರು.

‘ನಗರದ ವಿವಿಧೆಡೆ ಬಿಬಿಎಂಪಿ ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕಗಳಿಗೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿರುವ ಕಾರಣ ದೂರದ ಪ್ರದೇಶಗಳಲ್ಲಿ ಘಟಕ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಲಕ್ಷ್ಮಣ್‌ ಅವರನ್ನು ಸಂಪರ್ಕಿಸಿದಾಗ, ‘ಮಧುಗಿರಿ ಹಾಗೂ ಕೋಲಾರದಲ್ಲಿ ‘ಪರಿಸರ ಸೌಲಭ್ಯ ನಗರ’ಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟದ ತಾತ್ವಿಕ ಒಪ್ಪಿಗೆ ಸಿಕ್ಕಿರುವುದು ನಿಜ’ ಎಂದು ಖಚಿತಪಡಿಸಿದರು. ‘ಎರಡೂ ಘಟಕಗಳಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.