ADVERTISEMENT

ಮರಳು ದಂಧೆಗೆ ಮಾವತ್ತೂರು ಕೆರೆ ಮಾಯ

ಎ.ಆರ್.ಚಿದಂಬರ
Published 21 ಸೆಪ್ಟೆಂಬರ್ 2017, 6:47 IST
Last Updated 21 ಸೆಪ್ಟೆಂಬರ್ 2017, 6:47 IST
ತುಮಕೂರು ಜಿಲ್ಲೆಯಲ್ಲೆ ಮೊಟ್ಟಮೊದಲ ಬಾರಿಗೆ 1985ರಲ್ಲಿ ವಿಶ್ವೇಶ್ವರಯ್ಯ ಅವರಿಂದ ನಿರ್ಮಾಣವಾದ ಮಾವತ್ತೂರು ಕೆರೆ
ತುಮಕೂರು ಜಿಲ್ಲೆಯಲ್ಲೆ ಮೊಟ್ಟಮೊದಲ ಬಾರಿಗೆ 1985ರಲ್ಲಿ ವಿಶ್ವೇಶ್ವರಯ್ಯ ಅವರಿಂದ ನಿರ್ಮಾಣವಾದ ಮಾವತ್ತೂರು ಕೆರೆ   

ಕೊರಟಗೆರೆ:  ನೂರಾರು ಹಳ್ಳಿಗರಿಗೆ ಬದುಕು ನೀಡುತ್ತಿದ್ದ ತಾಲ್ಲೂಕಿನ ಮಾವತ್ತೂರು ಕೆರೆ ಅಕ್ರಮ ಮರಳು ದಂಧೆ, ಒತ್ತುವರಿ ದಾಹಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
ಸರ್.ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಕಟ್ಟಿದ ತಾಲ್ಲೂಕಿನ ಮಾವತ್ತೂರು ಕೆರೆಗೆ  ವಿಶಿಷ್ಟವಾದ ಸ್ಥಾನವಿತ್ತು. ನೂರಾರು ಹಳ್ಳಿಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರೊದೊಗಿಸುತ್ತಿದ್ದ ಕೆರೆ ಈಗ ಇತಿಹಾಸ ಮಾತ್ರ ಎಂಬತ್ತಾಗಿದೆ.

ಜನ, ಜಾನುವಾರುಗಳಿಗೆ ಜೀವಜಲವಾಗಿದ್ದ ಕೆರೆ ಇದಾಗಿತ್ತು.  ಹಿರಿದಾದ ಕೆರೆಗೆ ಜನರ ಅನುಕೂಲಕ್ಕಾಗಿ ಎರಡು ನಾಲೆಗಳಿವೆ. ಅದರಲ್ಲಿ ಎಡದಂಡೆ ನಾಲೆ 10 ಕಿ.ಮೀ. ಬಲದಂಡೆ ನಾಲೆ 7.20 ಉದ್ದ ನಿರ್ಮಾಣ ಮಾಡಲಾಗಿದೆ. ಆದರೆ ಈಗ ಒತ್ತುವರಿ ಕಾರಣ ಕೆರೆಯ ವಿಸ್ತೀರ್ಣ 2 ಸಾವಿರ ಎಕರೆಗೆ ಇಳಿದಿದೆ ಎನ್ನುತ್ತಾರೆ ಇಲ್ಲಿನ ಜನರು.

ಇದರ ಹಿನ್ನೀರಿನಲ್ಲೆ ತೀತಾ ಜಲಾಶಯ ಕೂಡ ಇದ್ದು, ಇದರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಒತ್ತುವರಿ, ಮರಳು ದಂಧೆಯಿಂದ ಜಲಾಶಯ ನಲುಗುತ್ತಿದೆ. ಈ ಕೆರೆ ತುಂಬಿದರೆ ತಾಲ್ಲೂಕಿನ ಬಹುತೇಕ ಪ್ರದೇಶದ ಕೊಳವೆ ಬಾವಿಗಳು ಮರು ಪೂರ್ಣಗೊಳ್ಳುತ್ತವೆ. ಕಳೆದ ಬಾರಿ ಮಾವತ್ತೂರು ಕೆರೆ ಅರ್ಧ ನೀರು ಬಂದಿದ್ದರಿಂದ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ನೀರಿಲ್ಲದೆ ಒಣಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಬಂದಿತ್ತು.

ADVERTISEMENT

ಈ ಕೆರೆಯಲ್ಲಿ ನೀರಿದ್ದರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ, ಬೈಚಾಪುರ, ಬೈರೇನಹಳ್ಳಿ, ಸೋಂಪುರ, ಬೊಮ್ಮಲದೇವಿಪುರ, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಹೊಸಪಾಳ್ಯ, ಅಕ್ಕಾಜಿಹಳ್ಳಿ, ಚಿಕ್ಕಸಾಗ್ಗೆರೆ, ದೊಡ್ಡಸಾಗ್ಗೆರೆ ವ್ಯಾಪ್ತಿಯಲ್ಲಿ ಬರವೇ ಇಲ್ಲ.

ಕೆರೆ ಪ್ರದೇಶದಲ್ಲೇ ಅರಣ್ಯ ಇಲಾಖೆಯಿಂದ ಅರ್ಕಿಲಸ್ ಗಿಡಗಳನ್ನು ಬೆಳೆಸಲಾಗಿದೆ. ಈಗಾಗಲೇ ಒಂದು ಬೆಳೆ ಕಟಾವು ಮಾಡಲಾಗಿದ್ದು, ಮತ್ತೊಂದು ಬೆಳೆ ಕಟಾವಿಗೆ ಬಂದು ನಿಂತಿದೆ. ಇದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀಡಲಾಗಿದ್ದು, ಇದೂ ಕೂಡ ಇಲ್ಲಿ ದುರುಪಯೋಗವಾಗುತ್ತಿದೆ.

ಮರಳು ಮಾಫಿಯಾ ಅಧಿಕವಾಗಿದ್ದು, ರಾತ್ರಿ ವೇಳೆ ನಿತ್ಯ ಮರಳು ಸಾಗಾಟ ಮಾಡುತ್ತಾರೆ. ಕೆರೆ ಅಭಿವೃದ್ಧಿ ಹಾಗೂ ಪುನರುಜ್ಜೀವನ ಹೆಸರಿನಲ್ಲಿ ಪ್ರತಿ ಬಾರಿ ಕೆರೆ ಏರಿ ಮೇಳಿನ ಬೇಲಿಗಿಡಗಳನ್ನು ಕಡಿಯಲಾಗುತ್ತದೆ. ಗಿಡಗಳನ್ನು ಬುಡ ಸಮೇತ ಕಿತ್ತರೆ ಒಳ್ಳೆಯದು ಎಂದು ಗ್ರಾಮದ ಯುವಕರಾದ ಸಂತೋಷ್, ಆನಂದ್, ಶ್ರೀನಿವಾಸ್, ರಮೇಶ್, ಹರೀಶ್, ಹರ್ಷವರ್ಧನ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.