ADVERTISEMENT

ಮುಂದುವರಿದರೆ ಉಗ್ರ ಹೋರಾಟ

ಪೌರ ಕಾರ್ಮಿಕರ ಗುತ್ತಿಗೆ ರದ್ದತಿಗೆ ಮಾ. 31ರ ಗಡುವು: ಜಿಲ್ಲಾ ಸಮಾವೇಶದಲ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:24 IST
Last Updated 3 ಫೆಬ್ರುವರಿ 2017, 7:24 IST
ಮುಂದುವರಿದರೆ ಉಗ್ರ ಹೋರಾಟ
ಮುಂದುವರಿದರೆ ಉಗ್ರ ಹೋರಾಟ   

ತುಮಕೂರು: ‘ರಾಜ್ಯದಲ್ಲಿ ಮಾ.31ರ ನಂತರ ಗುತ್ತಿಗೆ ಪದ್ಧತಿ ಮುಂದುವರಿದರೆ ಏ.1 ರಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಪೌರಕಾರ್ಮಿಕರು ಸಜ್ಜಾಗಬೇಕು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಹೇಳಿದರು.

ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ, ಬೆಳಕು, ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘2017 ಮಾ.31ರೊಳಗೆ ಗುತ್ತಿಗೆ ಪದ್ಧತಿ ರದ್ದು ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಗಡುವಿಗೆ ಒಂದು ತಿಂಗಳು ಬಾಕಿ ಇದೆ. ಆದರೆ, ಅಧಿಕಾರಿಗಳು ಈ ಸಂಬಂಧ ಯಾವುದೇ ನಿಯಮ ರೂಪಿಸುತ್ತಿಲ್ಲ. ಗುತ್ತಿಗೆ ನೌಕರರ ಕಾಯಮಾತಿಗೆ ನಿಯಮ ರೂಪಿಸಲು ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಾರ ಕರೆದಿರುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಚರ್ಚಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಪಂಜಾಬ್‌, ಹರಿಯಾಣ ಹೊರತುಪಡಿಸಿದರೆ ಗುತ್ತಿಗೆ ಪದ್ಧತಿ ರದ್ದು ಮಾಡಿರುವ ಮೂರನೇ ರಾಜ್ಯ ನಮ್ಮದು. ಪಂಜಾಬ್‌ ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ನಿರ್ಮೂಲನೆಗೆ ಕೈಗೊಂಡ ಕ್ರಮ, ರೂಪುರೇಷೆಗಳನ್ನು ತರಿಸಿಕೊಂಡಿದ್ದು, ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದರು.

ಪೌರಕಾರ್ಮಿಕರಿಂದ ಸ್ವಚ್ಛಭಾರತ: ‘ದೇಶದಲ್ಲಿ 12 ಲಕ್ಷ ಪೌರಕಾರ್ಮಿಕರಿದ್ದಾರೆ. ಅವರಿಗಾಗಿ ಕೇಂದ್ರ ಸರ್ಕಾರ ಯಾವುದೇ ಯೋಜನೆ ಪ್ರಕಟಿಸಿಲ್ಲ. ಪೌರಕಾರ್ಮಿಕರಿಂದಲೇ ಸ್ವಚ್ಛ ಭಾರತ ನಿರ್ಮಾಣವಾಗುತ್ತಿದೆ ಎಂಬುದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಕೂಡಲೇ ಯೋಜನೆ ಪ್ರಕಟಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಮಲಸ್ವಚ್ಛ ಮಾಡುವಾಗ ಮಲಗುಂಡಿಗೆ ಬಿದ್ದು 58 ಮಂದಿ ಮೃತಪಟ್ಟಿದ್ದಾರೆ. ಆದರೆ, ಬಹುತೇಕರಿಗೆ ಪರಿಹಾರ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಾನಗರ ಪಾಲಿಕೆಯ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಶೇ 20 ರಷ್ಟು ಹಣ ತೆಗೆದಿರಿಸಲಾಗಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ₹50 ಲಕ್ಷದವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ಆದೇಶವಾಗಿದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ಅನಿಷ್ಟ ಕಾಯಕದಿಂದ ಮುಕ್ತಿ ದೊರೆಯಲಿದೆ’ ಎಂದರು.

ಸಂಕಷ್ಟ ತೋಡಿಕೊಂಡರು: ಜಿಲ್ಲೆಯ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ನಿತ್ಯ ಎದುರಿಸುತ್ತಿರುವ ಸಂಕಷ್ಟವನ್ನು ಆಯೋಗದ ಅಧ್ಯಕ್ಷರ ಮುಂದೆ ವಿವರಿಸಿದರು. ಗುತ್ತಿಗೆದಾರರು ಕಾರ್ಮಿಕರ ವೇತನದಲ್ಲಿ ಪಿಎಫ್‌ ಹಾಗೂ ಇಎಸ್‌ಐ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಹಣ ಏನಾಗಿದೆ ಎಂಬ ಮಾಹಿತಿಯೇ ಇಲ್ಲ. ನಿವೇಶನ, ವಸತಿ ಸೌಲಭ್ಯವಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ವೇತನ ₹ 12 ಸಾವಿರ ನೀಡಿದರೂ ಗುತ್ತಿಗೆದಾರು ಕೇವಲ ₹ 4 ಸಾವಿರ ಮಾತ್ರ ನಮಗೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಮೇಯರ್‌ ಯಶೋದಮ್ಮ, ಮಾಜಿ ಸಚಿವ ಎಸ್‌.ಕೆ.ಕಾಂತ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್‌, ಪಾಲಿಕೆ ಆಯುಕ್ತ ಅಶಾದ್‌ ಆರ್‌.ಷರೀಫ್‌, ಜಿ.ಪಂ.ಸದಸ್ಯ ಕೆಂಚಮಾರಯ್ಯ, ಪದ್ಮ, ಪಿ.ಎನ್‌.ರಾಮಯ್ಯ ಇತರರು ಉಪಸ್ಥಿತರಿದ್ದರು.

ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ
‘ರಾಜ್ಯ ಸರ್ಕಾರ 1000 ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು.

‘ವಿದೇಶದಲ್ಲಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುವ ಬಗೆ, ಸ್ವಚ್ಛತೆಗೆ ನೀಡಿರುವ ಆದ್ಯತೆ ಕುರಿತು ಅಧ್ಯಯನ ನಡೆಸಲಾಗುವುದು’ ಎಂದರು.
‘ಗುತ್ತಿಗೆ ಪೌರಕಾರ್ಮಿಕರ ಪಿಎಫ್‌, ಇಎಸ್‌ಐಗೆ ಕನ್ನ ಹಾಕುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

‘ಗೃಹಭಾಗ್ಯ ಯೋಜನೆಯನ್ನು ನಿವೃತ್ತಿ ಹೊಂದಿದ ಮತ್ತು ಗುತ್ತಿಗೆ ಪೌರ ಕಾರ್ಮಿಕರಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಪೌರಕಾರ್ಮಿಕರ ಕುರಿತು ಪಠ್ಯಪುಸ್ತಕದಲ್ಲಿ ಪರಿಚಯಿಸಲು ಸರ್ಕಾರ ಮುಂದಾಗಿದೆ. ಫೆ.13 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಪೌರಕಾರ್ಮಿಕರು ನಮ್ಮ ರಕ್ಷಕರು, ಬನ್ನಿ ಗೌರವಿಸೋಣ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ಅವ್ಯವಹಾರದ ತನಿಖೆಗೆ ಆಗ್ರಹ
‘ಗುತ್ತಿಗೆ ಪೌರಕಾರ್ಮಿಕರ ವೇತನದಲ್ಲಿ ಕಡಿತ ಮಾಡಿಕೊಂಡಿರುವ ಭವಿಷ್ಯನಿಧಿ, ಇಎಸ್‌ಐ ಹಣವನ್ನು ಗುತ್ತಿಗೆದಾರರು ಆಯಾ ಸಂಸ್ಥೆಗಳಿಗೆ ಜಮೆ ಮಾಡದೇ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ನಾರಾಯಣ ಒತ್ತಾಯಿಸಿದರು.

‘ಬಿಬಿಎಂಪಿ ವ್ಯಾಪ್ತಿಯ 25 ಸಾವಿರ ಪೌರಕಾರ್ಮಿಕರ ಪಿಎಫ್‌, ಇಎಸ್‌ಐ ಹಣವನ್ನು ಗುತ್ತಿಗೆದಾರರು 10 ವರ್ಷದಿಂದ ಜಮೆ ಮಾಡಿಲ್ಲ.
₹ 384 ಕೋಟಿ ಮೊತ್ತದ ಈ ಅವ್ಯವಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಒಡಿ ತನಿಖೆ ವಹಿಸಿದ್ದಾರೆ. ಅದೇ ರೀತಿ ರಾಜ್ಯ ವ್ಯಾಪಿ ತನಿಖೆ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.