ADVERTISEMENT

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:05 IST
Last Updated 24 ಏಪ್ರಿಲ್ 2017, 5:05 IST
ಸಮಾವೇಶದಲ್ಲಿ ನಿರ್ಮಲಾನಂದ ನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿಗೆ ಭಕ್ತ ಸಮೂಹ ಗುರುವಂದನೆ ಸಲ್ಲಿಸಿತು. ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ, ಟಿ.ಬಿ.ಜಯಚಂದ್ರ, ಬಿ.ಎನ್.ಚಂದ್ರಪ್ಪ, ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ ಇದ್ದರು
ಸಮಾವೇಶದಲ್ಲಿ ನಿರ್ಮಲಾನಂದ ನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿಗೆ ಭಕ್ತ ಸಮೂಹ ಗುರುವಂದನೆ ಸಲ್ಲಿಸಿತು. ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ, ಟಿ.ಬಿ.ಜಯಚಂದ್ರ, ಬಿ.ಎನ್.ಚಂದ್ರಪ್ಪ, ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ ಇದ್ದರು   

ಶಿರಾ: ರಾಷ್ಟ್ರೀಯ ಪಕ್ಷಗಳಿಂದ ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಹೆಚ್ಚಿನ ಅನ್ಯಾಯವಾಗಿದೆ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಭಾನುವಾರ ನಡೆದ  ನಂಜಾವಧೂತ ಸ್ವಾಮೀಜಿಯವರ 38 ನೇ ವರ್ಧಂತಿ ಮಹೋತ್ಸವ ಮತ್ತು ನೀರಾವರಿ ಹಕ್ಕೊತ್ತಾಯ ಸಮಾವೇಶದಲ್ಲಿ ‘ಶ್ರೀ ಅವಧೂತ ಪ್ರಜ್ಞಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ‘ಸ್ಫಟಿಕ ಯೋಗಿ’ ಚಿತ್ರ ಮಾಲಿಕೆ ಪುಸ್ತಕ ಬಿಡುಗಡೆ ಮಾಡಿದರು.

‘ರಾಜ್ಯಕ್ಕೆ ನೀರು ನೀಡುವಂತೆ ಲೋಕಸಭೆಯಲ್ಲಿ ಒಂದು ಲೋಟದಲ್ಲಿ ನೀರು ಹಿಡಿದುಕೊಂಡು ಕಣ್ಣೀರು ಹಾಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತು ಕೃಷ್ಣ ನದಿ ನೀರಿನ ವಿಚಾರದಲ್ಲಿ ಆಂಧ್ರಪ್ರದೇಶದಿಂದ  ರಾಜ್ಯಕ್ಕೆ ಅನ್ಯಾಯವಾಗಿದೆ. ನಮಗೆ ಈ ಎರಡೂ ಯೋಜನೆಗಳಿಂದ 734 ಟಿಎಂಸಿ ಅಡಿ ನೀರು ಮಾತ್ರ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿದೆ’ ಎಂದರು.

ADVERTISEMENT

ಗುರುವಂದನೆ ಸ್ವೀಕರಿಸಿ ಮಾತನಾಡಿದ ನಂಜಾವಧೂತ ಸ್ವಾಮೀಜಿ, ‘ವೇದಿಕೆಯಲ್ಲಿರುವರು ಮುಂದೆ ಅಧಿಕಾರಕ್ಕೆ ಬಂದರೆ  ಮಧ್ಯ ಕರ್ನಾಟಕಕ್ಕೆ ನೀರು ತರುವ ಸಂಕಲ್ಪವನ್ನು ಈ ವೇದಿಕೆಯಲ್ಲಿ ಮಾಡಬೇಕು. ರೈತರ ಪರವಾಗಿ ನೀವು ನಡೆಸುವ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದರು.

ಆದಿಚುಂಚನಗಿರಿ ಸಂಸ್ಥಾನ ಮಠದ  ನಿರ್ಮಲಾನಂದ ಸ್ವಾಮೀಜಿ ಮಾತನಾಡಿ,  ‘ನಂಜಾವಧೂತ ಸ್ವಾಮೀಜಿ ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶವಾಗಿ ಮಾಡುವ ಮೂಲಕ ಈ ಬಗ್ಗೆ ಸಮರ್ಪಕವಾಗಿ ಚರ್ಚೆ ನಡೆಸುವಂತೆ ಮಾಡಿದ್ದಾರೆ’ ಎಂದರು.

ಇಂದನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ,‘ಒಕ್ಕಲಿಗ ಸಮಾಜಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿ ಎರಡು ಕಣ್ಣುಗಳಿದ್ದಂತೆ’ ಎಂದು ಬಣ್ಣಿಸಿದರು.

ನಂಜಾವಧೂತ ಸ್ವಾಮೀಜಿಯವರ ಜನ್ಮ ಜಯಂತಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ವಿಳಂಬ ಮಾಡದೆ ತ್ವರಿತವಾಗಿ  ಮುಗಿಸಿ ನೀರು ಕೊಡುವ ಕೆಲಸವಾಗಬೇಕು. ಯಾವುದೇ ಕಾರಣಕ್ಕೂ ನೀರಾವರಿ ಯೋಜನೆಗಳ ಬಗ್ಗೆ ಕಾಲಹರಣ ಮಾಡುಬಾರದು’ ಎಂದು ಹೇಳಿದರು.

ಸಮಾವೇಶದಲ್ಲಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮುಖಂಡ ಬಿ.ಸತ್ಯನಾರಾಯಣ, ಆಂದ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎನ್.ರಘುವೀರರೆಡ್ಡಿ ಮಾತನಾಡಿದರು.

ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಶಾಸಕರಾದ ವೈ.ಎ.ನಾರಾಯಣ ಸ್ವಾಮಿ, ಅಶ್ವತ್ಥನಾರಾಯಣ, ಸಿ.ಬಿ.ಸುರೇಶ್ ಬಾಬು, ತಿಮ್ಮರಾಯಪ್ಪ, ಸುಧಾಕರ್ ಲಾಲ್, ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ತಿಪ್ಪಾರೆಡ್ಡಿ, ಬೆಮೆಲ್ ಕಾಂತರಾಜು, ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಉಗ್ರೇಶ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಕೃಷ್ಣ, ಆರ್.ರಾಮು  ಹಾಜರಿದ್ದರು.

ಭಕ್ತ ಸಾಗರ
ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲು ಮಧುಗಿರಿ, ಕೊರಟಗೆರೆ, ಪಾವಗಡ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಹಿರಿಯೂರು, ಚಿತ್ರದುರ್ಗ,  ಬೆಂಗಳೂರು ಹಾಗೂ ಆಂಧ್ರಪ್ರದೇಶದಿಂದ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.