ADVERTISEMENT

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ರೈತ ಪರ ಸಂಘಟನೆಗಳ ಸಮನ್ವಯ ವೇದಿಕೆಯಿಂದ ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:33 IST
Last Updated 26 ಏಪ್ರಿಲ್ 2018, 13:33 IST

ತಿಪಟೂರು: ಜನಪ್ರತಿನಿಧಿಗಳಾಗಲು ಬಯಸುವವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ದೃಢ ಭರವಸೆಯನ್ನು ನೀಡಬೇಕು ಎಂದು ರೈತ ಪರ ಸಂಘಟನೆಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.

ವೇದಿಕೆಯ ತಾಲ್ಲೂಕು ಘಟಕದಿಂದ ನಗರದಲ್ಲಿ ಬುಧವಾರ ನಡೆದ ಕರಪತ್ರ ಬಿಡುಗಡೆ ಮತ್ತು ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ವೇದಿಕೆ ಪ್ರಮುಖ ಹಾಗೂ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್.ದೇವರಾಜು ಮಾತನಾಡಿ, ಹೊನ್ನವಳ್ಳಿ ಏತ ನೀರಾವರಿ ಯೋಜನೆಯಡಿ ಎಲ್ಲ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದರು.

ಬಹುಗ್ರಾಮ ನೀರಿನ ಯೋಜನೆ ಇರುವುದರಿಂದ ನೀರು ಹಂಚಿಕೆ ಪ್ರಮಾಣ ಹೆಚ್ಚಬೇಕು. ಹಾಲ್ಕುರಿಕೆ- ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 26 ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರವಾಗಿ ಮುಗಿಸಬೇಕು. ಕಡಿಮೆ ಖರ್ಚಿನಲ್ಲಿ ಕೆರೆಗಳನ್ನು ತುಂಬಿಸಬಹುದಾದ ಯಗಚಿ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು.

ADVERTISEMENT

ಎತ್ತಿನಹೊಳೆ ಯೋಜನೆಯಲ್ಲೂ ತಿಪಟೂರಿಗೆ ನೀರಿನ ಹಂಚಿಕೆಯಾಗಬೇಕು. ಸದ್ಯ ಜಾರಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಕೆರೆಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ-206 ರಸ್ತೆ ವಿಸ್ತರಣೆ ಸಂತ್ರಸ್ತರಿಗೆ ಗೌರವಯುತ ಪರಿಹಾರ ನೀಡಬೇಕು. ಬಗರ್ ಹುಕುಂ ಸಕ್ರಮ ಸಾಗುವಳಿದಾರರಿಗೆ ಭೂಮಿಯನ್ನು ಸಕ್ರಮಗೊಳಿಸಬೇಕು. ರೈತರು ಬೆಳೆದ ಬೆಳೆಗೆ ಸ್ವಾಮಿನಾಥನ್ ವರದಿಯಂತೆ, ಮಾಡಿದ ಖರ್ಚು ಮತ್ತು ಅದರ ಮೇಲೆ ಶೇ 50ರಷ್ಟು ಹೆಚ್ಚುವರಿ ಬೆಲೆ ನಿಗದಿಪಡಿಸಬೇಕು ಎಂದು ಹೇಳಿದರು.

ತಿಪಟೂರು ತಾಲ್ಲೂಕಿನಲ್ಲಿ ಸುಮಾರು 180ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಹೂಳೆತ್ತುವ, ಏರಿ ರಿಪೇರಿ ಮಾಡುವ, ನೀರು ಹರಿವಿನ ದಾರಿಯನ್ನು ಸುಗಮಗೊಳಿಸುವ ಮೂಲಕ ಕೆರೆಗಳ ಪುನಶ್ಚೇತನ ಮಾಡಬೇಕು ಎಂದರು.

ವೇದಿಕೆ ಮೂಲಕ ಈ ಎಲ್ಲಾ ಸಮಸ್ಯೆ ಮತ್ತು ಒತ್ತಾಯಗಳ ಕುರಿತು ತಾಲ್ಲೂಕಿನಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದು ಪ್ರಕಟಿಸಿದರು.

ವೇದಿಕೆ ಸಂಚಾಲಕ ಎಸ್.ಎನ್. ಸ್ವಾಮಿ, ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ, ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಟಿ.ಎಸ್. ದೇವರಾಜು, ಮುಖಂಡರಾದ ಲೋಕೇಶ್, ಆನಂದ್, ಬಳವನೇರಳು ಸಿದ್ದಯ್ಯ ಇದ್ದರು.

ಶಾಶ್ವತ ಮೇವು ಬ್ಯಾಂಕ್ ಸ್ಥಾಪಿಸಿ

‘ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಕೊರತೆ ನೀಗಿಸಲು ಶಾಶ್ವತವಾಗಿ ಮೇವು ಬ್ಯಾಂಕ್ ಸ್ಥಾಪನೆಯಾಗಬೇಕು. ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಲು ಯೋಜನೆಗಳನ್ನು ಮಾಡಬೇಕು. ವ್ಯವಸಾಯ, ಮುಖ್ಯವಾಗಿ ತೆಂಗು ಅಭಿವೃದ್ಧಿ ಕಾರ್ಯ, ಕೈಗಾರಿಕೆಗಳನ್ನು ತೆರೆಯುವುದು, ಇನ್ನಿತರ ಉದ್ಯೋಗ ಸೃಷ್ಟಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿವಿಧೆಡೆ ವಾರಕ್ಕೊಮ್ಮೆ ನಡೆಯುವ ರೈತರ ಸಂತೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.