ADVERTISEMENT

ವಾರ್ಡ್‌ಗಳ ಪುನರ್‌ ವಿಂಗಡಣೆ; ವಿಸ್ತರಣೆಯಾಗದ ಗಡಿ

ಮಹಾನಗರ ಜನರ ನಿರೀಕ್ಷೆ ಹುಸಿ, ಜನಸಂಖ್ಯೆಯ ವಿಷಯದಲ್ಲೂ ಏರುಪೇರು

ಸಿ.ಕೆ.ಮಹೇಂದ್ರ
Published 31 ಜನವರಿ 2017, 7:46 IST
Last Updated 31 ಜನವರಿ 2017, 7:46 IST
ವಾರ್ಡ್‌ಗಳ ಪುನರ್‌ ವಿಂಗಡಣೆ; ವಿಸ್ತರಣೆಯಾಗದ ಗಡಿ
ವಾರ್ಡ್‌ಗಳ ಪುನರ್‌ ವಿಂಗಡಣೆ; ವಿಸ್ತರಣೆಯಾಗದ ಗಡಿ   
ತುಮಕೂರು: ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡಣೆಯ ಕುತೂಹಲಕ್ಕೆ ತೆರೆ ಬಿದ್ದಿದೆ. ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
 
ಮಹಾನಗರ ಪಾಲಿಕೆಗೆ ಇನ್ನೆರಡು ವರ್ಷದಲ್ಲಿ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ವಾರ್ಡ್‌ಗಳ ಪುನರ್‌ ರಚನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ. ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಬೇಕಾಗಿತ್ತು.
 
ತುಮಕೂರು ನಗರ ನಗರಸಭೆಯಾಗಿದ್ದಾಗ ಇದ್ದ  33 ವಾರ್ಡ್‌ಗಳನ್ನೆ ಪುನರ್‌ ವಿಂಗಡಣೆಯಲ್ಲೂ ಉಳಿಸಿಕೊಳ್ಳಲಾಗಿದೆ. ಹೀಗಾಗಿ 41 ವಾರ್ಡ್‌ಗಳು ಆಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.
 
ನಗರಸಭೆಯಾಗಿದ್ದಾಗ ಇದ್ದ ಮಹಾನಗರದ ಗಡಿಯ ವ್ಯಾಪ್ತಿಯನ್ನು ಸಹ ವಿಸ್ತರಿಸಲಾಗಿಲ್ಲ. ಇದರಿಂದಾಗಿ ನಗರದ ಬೆಳವಣಿಗೆಗೆ ತಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
 
ನಗರದ ಹೊರವಲಯದ ಪ್ರದೇಶಗಳಾದ ಕ್ಯಾತ್ಸಂದ್ರ, ಮೈದಾಳ, ಹೆಗ್ಗೆರೆ, ಗೂಳೂರು, ಯಲ್ಲಾಪುರ, ಶೆಟ್ಟಿಹಳ್ಳಿ– ಪಾಲಸಂದ್ರ, ಕುಪ್ಪೂರನ್ನು  ಸೇರಿಸಿಕೊಂಡು ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ.
 
ಸದ್ಯ, ನಗರಸಭೆಯಾಗಿದ್ದಾಗ ಇದ್ದ ವಾರ್ಡ್‌ಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ತರಲಾಗಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಇದು ಸಲ್ಲದು ಎಂದು ಕೆಲವರು ಹೇಳುತ್ತಿದ್ದಾರೆ.
 
ಬನಶಂಕರಿ ವಾರ್ಡ್‌ ಪಕ್ಕ ಅಮರಜ್ಯೋತಿ ನಗರ ಇದ್ದರೂ ಇದನ್ನು  ಸರಸ್ವತಿಪುರ ವಾರ್ಡ್‌ಗೆ ಸೇರಿಸಲಾಗಿದೆ. ಅನೇಕ ವಾರ್ಡ್‌ಗಳಲ್ಲಿ ಇಂಥ ಅವೈಜ್ಞಾನಿಕ ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.
 
ಪುನರ್‌ ವಿಂಗಡಣೆಯಲ್ಲಿ ಕೆಲವು ವಾರ್ಡ್‌ಗಳ ವ್ಯಾಪ್ತಿಯನ್ನು ಅತ್ಯಂತ ಚಿಕ್ಕದು ಮಾಡಿದ್ದರೆ, ಮತ್ತೆ ಕೆಲವು ವಾರ್ಡ್‌ಗಳ ವ್ಯಾಪ್ತಿಯನ್ನು ಹೆಚ್ಚು ಮಾಡಲಾಗಿದೆ. ಜನಸಂಖ್ಯೆಯ ವಿಷಯದಲ್ಲೂ ಇದೇ ರೀತಿ ಮಾಡಲಾಗಿದೆ.  
 
ಪಾಲಿಕೆಯ ಪ್ರತಿ ವಾರ್ಡ್‌ನ ಜನಸಂಖ್ಯೆ ಕನಿಷ್ಠ  10 ಸಾವಿರ ಇರಬೇಕೆಂಬ ನಿಯಮವನ್ನು ಪಾಲಿಸಿಲ್ಲ.  ಕೆಲವು ಕಡೆ 5 ಸಾವಿರ ಜನಸಂಖ್ಯೆ ಇದ್ದರೆ, ಇನ್ನೂ ಕೆಲವು ವಾರ್ಡ್‌ಗಳಲ್ಲಿ 12 ಸಾವಿರ ಮೀರಿದೆ. ಇದು ವಾರ್ಡ್‌ಗಳ ಅಭಿವೃದ್ಧಿಯ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
(ನಾಳೆ: ಯಾವ ಬಡಾವಣೆ, ಯಾವ ವಾರ್ಡ್‌ಗೆ)
 
**
ಜಿಲ್ಲಾಧಿಕಾರಿಗೆ ಪ್ರಸ್ತಾವ
ವಾರ್ಡ್‌  ಮರು ವಿಂಗಡಣೆಯ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುತ್ತದೆ. ಜಿಲ್ಲಾಧಿಕಾರಿ ಇದನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುತ್ತಾರೆ. ಇಲ್ಲಿಂದ ನಗರಾಭಿವೃದ್ಧಿ ಇಲಾಖೆಗೆ ನೀಡಲಾಗುತ್ತದೆ.

ನಂತರ ಗೆಜೆಟ್‌ ಪ್ರಕಟಣೆ ಹೊರಡಿಸಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ನಂತರ ಅಧಿಕೃತವಾಗಿ ವಾರ್ಡ್‌ಗಳ ಮರು ವಿಂಗಡಣೆಗೆ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.