ADVERTISEMENT

ವಿಜೃಂಭಣೆಯ ನಿಡಗಲ್ ದುರ್ಗ ಜಾತ್ರೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 9:21 IST
Last Updated 22 ಆಗಸ್ಟ್ 2017, 9:21 IST

ಪಾವಗಡ: ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ ಸೋಮವಾರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ರಾಮ ತನ್ನ ಬಾಣದಿಂದ ನಿರ್ಮಿಸಿದ್ದಾನೆ ಎಂಬ ಪ್ರತೀತಿ ಇರುವ ರಾಮತೀರ್ಥದಲ್ಲಿ ಮಹಿಳೆಯರು ಗಂಗಮ್ಮನ ಪೂಜೆ ಮಾಡಿದರು. ರಾಮತೀರ್ಥದ ಬಳಿಯಿರುವ ರಾಮಲಿಂಗೇಶ್ವರ, ಯೋಗನರಸಿಂಹ, ವೀರಭದ್ರ, ಕಷ್ಟ ನಿವಾರಣಾ ಪಚ್ಚೆ ಪಾರ್ಶ್ವನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆದವು.

ಭಕ್ತರು ಶೂಲದ ಈರಣ್ಣ ದೇಗುಲದಲ್ಲಿ ಹರಕೆ ತೀರಿಸಿದರು. ಯುವಕ, ಯುವತಿಯರ ನಿಡಗಲ್ ಬೆಟ್ಟಏರಿ ಶಿಖರದ ಬಸವಣ್ಣನಿಗೆ ಎಡೆ ಇಟ್ಟು ಪೂಜಿಸಿದರು. ಎರಡು ದಿನಗಳಿಂದ ಮಳೆ ಬಿದ್ದಿದ್ದರಿಂದ ಬೆಟ್ಟ ಹಸಿರಿನಿಂದ ಕಂಗೊಳಿಸಿತ್ತು.

ನಿಡಗಲ್ ಗ್ರಾಮದಿಂದ ರಾಮತೀರ್ಥದ ವರೆಗೆ ಕೀಲು ಕುದರೆ, ಚಕ್ಕೆ ಭಜನೆ, ಗರಡಿಗೊಂಬೆ, ಕೋಲಾಟ ಇತ್ಯಾದಿ ಕಲಾ ತಂಡಗಳೊಂದಿಗೆ ಮರವಣಿಗೆ ನಡೆಸಲಾಯಿತು.
ವಾಲ್ಮೀಕೆ ಜಾಗೃತಿ ವೇದಿಕೆ ಆಯೋಜಿಸಿದ್ದ ನಿಡಗಲ್ ಉತ್ಸವದಲ್ಲಿ ಪ್ರಾಧ್ಯಾಪಕ ಬಗ್ಗನಡು ನಾಗಭೂಷಣ್ ಮಾತನಾಡಿ, ‘ನಿಡಗಲ್ ಬೆಟ್ಟಕ್ಕೆ 2000ವರ್ಷಗಳ ಇತಿಹಾಸವಿದೆ. ಮಹಿಳೆ ಆಳ್ವಿಕೆ ನಡೆಸಿದ ಏಕೈಕ ಸಂಸ್ಥಾನ ನಿಡಗಲ್ ಸಂಸ್ಥಾನ. ನೀಲಾಂಜನೆ ಎಂಬ ರಾಣಿ ಆಳ್ವಿಕೆ ನಡೆಸುತ್ತಿದ್ದರಿಂದ ಕೋಟೆಯನ್ನು ನೀಲಾಂಜನಗಿರಿ ಎಂದು ಕರೆಯಲಾಗುತ್ತಿತ್ತು. 15 ನೇ ಶತಮಾನದಿಂದ ಈಚೆಗೆ ದುರ್ಗಕ್ಕೆ ನಿಡಗಲ್ ಎಂಬ ಹೆಸರು ಬಂದಿದೆ’ ಎಂದರು.

ADVERTISEMENT

ಶಿಡ್ಲೆಕೋಣ ವಾಲ್ಮೀಕಿ ಸಂಸ್ಥಾನದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಮಾತನಾಡಿ, ‘ಇತಿಹಾಸದ ಬಗ್ಗೆ ತಿಳಿವಳಿಕೆ ಇರುವವರು ಮಾತ್ರ ಸಾಧನೆ ಮಾಡಲು ಸಾಧ್ಯ. ನಿಡಗಲ್ ದುರ್ಗದಲ್ಲಿ ಶಾಖಾ ಮಠ ಸ್ಥಾಪಿಸಿ ಐತಿಹಾಸಿಕ ಸ್ಮಾರಕವನ್ನು ಸಂರಕ್ಷಿಸಲಾಗುವುದು’ ಎಂದರು. ಶಾಸಕ ಕೆ.ಎಂ. ತಿಮ್ಮರಾಯಪ್ಪ, ‘ನಿಡಗಲ್ ಅಭಿವೃದ್ಧಿಗಾಗಿ ₹ 1.75 ಕೋಟಿ ಅನುದಾನ ಮಂಜೂರು ಮಾಡಲಾಗಿದೆ’ ಎಂದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ ಲೋಕೇಶ್, ಲೇಖಕ ಹೊ.ಮಾ.ನಾಗರಾಜ್, ರಸ್ತೆ ಸಾರಿಗೆ ಅಧಿಕಾರಿ ತಿಪ್ಪೇಸ್ವಾಮಿ, ನಾಗರಾಜು, ಜಿಲ್ಲಾ ಪರಿಶಿಷ್ಟ ಪಂಗಡಗಳ ವಿಸ್ತರಣಾಧಿಕಾರಿ ರಾಜಕುಮಾರ್, ಬಂಧಿಖಾನೆ ನಿವೃತ್ತ ಅಧೀಕ್ಷಕ ವೀರೇಂದ್ರಸಿಂಹ, ಮುಖಂಡ ತಿಮ್ಮಾರೆಡ್ಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ ಬಸವರಾಜು, ವೈದ್ಯ ಡಾ.ಪ್ರಭಾಕರರೆಡ್ಡಿ, ಬಿಇಒ ಕುಮಾರಸ್ವಾಮಿ, ಪ್ರಕಾಶ್ ಬಾಬು, ಅನಿಲ್ ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗಿರಿರಾಜು, ನರಸಿಂಹ, ಶಿವಣ್ಣ , ಅಂಜಿನನಾಯ್ಕ, ಮುಖಂಡ ಜಗನ್ನಾಥ್, ಮದ್ದೂರಪ್ಪ, ಮಹಾರಾಜು, ಮಂಜುನಾಥ್, ಸಾದಿಕ್, ಪಾಲಯ್ಯ, ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.