ADVERTISEMENT

ಶಾಸಕರ ಹೇಳಿಕೆ ನಾಚಿಕೆಗೇಡಿನ ವಿಷಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:43 IST
Last Updated 21 ಸೆಪ್ಟೆಂಬರ್ 2017, 6:43 IST

ತುಮಕೂರು: ’ಜಿಲ್ಲೆಗೆ ಕುಡಿಯುವ ನೀರು ಬಿಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿರುವ ಶಾಸಕ ರಫೀಕ್ ಅಹಮ್ಮದ್ ಅವರ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದೆ’ ಎಂದು ಬಿಜೆಪಿ ಮುಖಂಡ ಶಿವಣ್ಣ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಚ್ಛಾಶಕ್ತಿಯ ಕೊರತೆಯಿಂದ ನೀರನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈಗ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ ಅವರಿಗೆ ನಿಜಕ್ಕೂ ಮರ್ಯಾದೆ ಇಲ್ಲ. ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರ ಜಿಲ್ಲಾಡಳಿತಕ್ಕೆ ನೀರು ಹರಿಸಲು ಜವಾಬ್ದಾರಿ ನೀಡಿದೆ. ಜಿಲ್ಲಾಡಳಿತ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನಗರದ ಶಾಸಕರ ನಡುವೆ ಹೊಂದಾಣಿಕೆಯೇ ಇಲ್ಲದಾಗಿದೆ. ಇದರಿಂದಾಗಿ ಜಿಲ್ಲೆಗೆ ನೀರು ಹರಿಸಲಾಗುತ್ತಿಲ್ಲ ಎಂದರು.

ADVERTISEMENT

ಶಾಸಕರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಕುಡಿಯುವ ನೀರಿನ ಕೆರೆಗಳಿಗೆ ಮೊದಲ ಆದ್ಯತೆ ನೀಡಬೇಕು. ಬುಗುಡನಹಳ್ಳಿ ಕೇರೆ ಸೇರಿದಂತೆ ಎಡ ದಂಡೆಯ ಎಲ್ಲ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಬೇಕು ಎಂದು ಒತ್ತಾಯಿಸಿದರು.

ನೀರು ನಮ್ಮ ಹಕ್ಕು. ನೀರಿಗಾಗಿ ಎಂತಹ ಹೋರಾಟಕ್ಕೂ ಸಹ ನಾವು ಸಿದ್ಧರಿದ್ದೇವೆ. ಕುಡಿಯುವ ನೀರು ಬಂಗಾರವಾಗಿದೆ. ಮೊದಲು ಜಿಲ್ಲೆಗೆ ಕುಡಿಯುವ ನೀರು ಹರಿಸಬೇಕು. ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದರೆ, ಜಿಲ್ಲೆಯಲ್ಲಿ ನೀರು ತುಂಬಿ ತುಳಕುತಿತ್ತು ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಬಿ.ಪಂಚಾಕ್ಷರಿ ಮಾತನಾಡಿ, ’2013 ರಿಂದ 2016ರವರೆಗಿನ ಮತದಾರರ ಪಟ್ಟಿಯ ಸೇರ್ಪಡೆ ಸಮಯದಲ್ಲಿ ಫಾರಂ– ನಂ6 ಇಲ್ಲದೆ ಮತದಾರರನ್ನು ಸೇರಿಸಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ಈ ನಿಟ್ಟಿನಲ್ಲಿ ತಂಡ ರಚಿಸಿ ತನಿಖೆ ಕೈಗೊಳ್ಳಲಾಗುತ್ತಿದೆ’ ಎಂದರು.

‘ಮತದಾರರ ಪಟ್ಟಿಗೆ 2013 ರಿಂದ 2016ರ ಅವಧಿಯಲ್ಲಿ ಒಟ್ಟು 32,404 ಮತದಾರರು ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಸುಮಾರು 25,000ಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಇದರಲ್ಲಿ ತಿಪಟೂರು, ಕುಣಿಗಲ್‌ ಮತ್ತು ಶಿರಾದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ’ ಎಂದರು. ಮುಖಂಡ ಎಂ.ಬಿ.ನಂದೀಶ್‌, ಮಹೇಶಪ್ಪ, ನಂಜುಂಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.