ADVERTISEMENT

ಸಿರಿಧಾನ್ಯಗಳಿಂದ ಆರೋಗ್ಯ ಸುಧಾರಣೆ

‘ಸಿರಿಧಾನ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:54 IST
Last Updated 9 ಜನವರಿ 2017, 9:54 IST

ತಿಪಟೂರು: ‘ಅತ್ಯಂತ ಕಡಿಮೆ ಪ್ರಮಾಣದ ನೀರಿನಲ್ಲಿ ಬೆಳೆಯಲು ಸಾಧ್ಯವಿರುವ ಸಿರಿಧಾನ್ಯಗಳು ಮನುಷ್ಯನ ಆರೋಗ್ಯ ಸುಧಾರಿಸುತ್ತವೆ’ ಎಂದು ಕೃಷಿ ತಜ್ಞ ಮೈಸೂರಿನ ಡಾ.ಖಾದರ್ ಅಭಿಪ್ರಾಯಪಟ್ಟರು.

ನಗರದ ಕೆಐಟಿ ಸಭಾಂಗಣದಲ್ಲಿ ಸಿರಿಧಾನ್ಯ ಬಳಕೆದಾರರು ಭಾನುವಾರ ಆಯೋಜಿಸಿದ್ದ ‘ಸಿರಿಧಾನ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
‘ಕೃಷಿಕರು ಆದಾಯ ಹೆಚ್ಚಿಸಿಕೊಳ್ಳಲು ವಾಣಿಜ್ಯ ಬೆಳೆಗಳನ್ನು ಮಾತ್ರ ಬೆಳೆಯಲು ಸೀಮಿತರಾಗಬಾರದು. ಆರೋಗ್ಯ ಸುಧಾರಣೆಗಾಗಿ ಸಿರಿಧಾನ್ಯಗಳನ್ನೂ ಬೆಳೆಯಬೇಕು. ಬೆಳೆದ ಪದಾರ್ಥಗಳನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಕಾರ್ಪೊರೇಟ್ ಕಂಪೆನಿಗಳು ಹಾಗೂ ಬಂಡವಾಳಶಾಯಿಗಳ ಹುನ್ನಾರದಿಂದ ಕೃಷಿ ಕ್ಷೇತ್ರವೂ ವಾಣಿಜ್ಯೀಕರಣವಾಗುತ್ತಿವೆ.   ಅಡಿಕೆ, ಕಬ್ಬು, ತಂಬಾಕು ಮತ್ತಿತರ ವಾಣಿಜ್ಯ ಬೆಳೆ ಹಾಗೂ ಮಾದಕ ವಸ್ತುಗಳನ್ನು ಬೆಳೆಯಲು ಶೇ 28 ರಷ್ಟು ಕೃಷಿ ಭೂಮಿ ಬಳಕೆಯಾಗುತ್ತಿದೆ. ಈ ಬೆಳವಣಿಗೆಯು ಮನುಕುಲದ ಆರೋಗ್ಯ ದೃಷ್ಟಿಯಿಂದ ಆತಂಕಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಸಿರಿಧಾನ್ಯಗಳನ್ನು ಹಕ್ಕಿ ಪಕ್ಷಿಗಳು ಸೇವಿಸಿ ರೈತರಿಗೆ ನಷ್ಟವುಂಟಾದರೆ, ಅವುಗಳ ಗೊಬ್ಬರದಿಂದ ಮಣ್ಣಿನ ಫಲವತ್ತೆ ಹೆಚ್ಚುತ್ತದೆ ಎಂಬುದನ್ನು ಕೃಷಿಕರು ಮರೆಯಬಾರದು. ಮಣ್ಣಿನ ಫಲವತ್ತತೆ ಇಲ್ಲದೆ ಮನುಷ್ಯನ ಆರೋಗ್ಯ ಸುಧಾರಣೆ ಸಾಧ್ಯವಿಲ್ಲ’ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ,  ‘ಸರ್ಕಾರ ಸಾವಯವ ರೈತರನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದರೂ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸಿರಿಧಾನ್ಯಗಳಾದ ಆರ್ಕ, ನವಣೆ, ಹೊರಲೆ, ಸಾವೆ, ಸಜ್ಜೆ, ರಾಗಿ ಇವುಗಳು ಈ ಹಿಂದೆ ಬಡವರ ಆಹಾರವಾಗಿದ್ದವು. ಇಂದು ಸಿರಿವಂತರ ಆಹಾರವಾಗಿರುವುದರಿಂದ ಸಿರಿಧಾನ್ಯ ಎಂಬ ಹೆಸರು ಬಂದಿದೆ’ ಎಂದರು. 

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ಪೇಟೆ ಕೃಷ್ಣ ಮಾತನಾಡಿದರು. ಸಿರಿಧಾನ್ಯ ಸಂಭ್ರಮ ಕಾರ್ಯಕ್ರಮದ ಸಂಘಟಕ ಉಪನ್ಯಾಸಕ ಗೋಪಾಲನಹಳ್ಳಿ ರಘು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.