ADVERTISEMENT

ಸ್ನೇಹ ಬೆಸೆಯುವ ‘ದೇಶದ ಗೌರಮ್ಮ’

ಜಿ.ಧನಂಜಯ
Published 28 ಆಗಸ್ಟ್ 2014, 9:39 IST
Last Updated 28 ಆಗಸ್ಟ್ 2014, 9:39 IST
ಚಿಕ್ಕನಾಯಕನಹಳ್ಳಿಯ ರುದ್ರನಗುಡಿಯಲ್ಲಿ ಹಿಂದಿನ ವರ್ಷದ ಗೌರಿ ಹಬ್ಬದಲ್ಲಿ ಪ್ರತಿಷ್ಠಾಪಿಸಿದ್ದ ದೇಶದ ಗೌರಮ್ಮ ಮೂರ್ತಿ.
ಚಿಕ್ಕನಾಯಕನಹಳ್ಳಿಯ ರುದ್ರನಗುಡಿಯಲ್ಲಿ ಹಿಂದಿನ ವರ್ಷದ ಗೌರಿ ಹಬ್ಬದಲ್ಲಿ ಪ್ರತಿಷ್ಠಾಪಿಸಿದ್ದ ದೇಶದ ಗೌರಮ್ಮ ಮೂರ್ತಿ.   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹೆಣ್ಣು ಮಕ್ಕಳು ಗೌರಿ ಹಬ್ಬದ ದಿನಕ್ಕಾಗಿ ಇಡಿ ವರ್ಷ ಎದುರು ನೋಡುತ್ತಿರುತ್ತಾರೆ. ಗೌರಿ ಹಬ್ಬ ಎನ್ನುವುದು ಅವರ ಪಾಲಿಗೆ ಬಾಲ್ಯದ ಗೆಳತಿಯರ ಒಡನಾಟ, ತವರು ಮನೆ ಸುಖ ಮತ್ತು ಸೋದರ ಸಂಬಂಧ ಗಟ್ಟಿಗೊಳ್ಳುವ ದಿನ

ದೇಶದ ಗೌರಮ್ಮ: ಪಟ್ಟಣದ ರುದ್ರನ ಗುಡಿಯಲ್ಲಿ ಪ್ರತಿವರ್ಷ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲೆಡೆ ದೊಡ್ಡಗಾತ್ರದ ಗಣೇಶನ ಪಕ್ಕದಲ್ಲಿ ಪುಟ್ಟ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಇಲ್ಲ ಮಾತ್ರ, ಗೌರಮ್ಮನೇ ಗಾತ್ರದಲ್ಲಿ ದೊಡ್ಡವಳು. ಅವಳ ಪಕ್ಕದಲ್ಲಿ ಗಣಪ ಪುಟ್ಟ ಕೂಸಿನಂತೆ ಕಾಣುತ್ತಾನೆ.

ಶ್ರಾವಣ ಮಾಸದಲ್ಲಿ ತವರು ಮನೆಯಿಂದ ತರುವ ಬಾಗಿನವನ್ನು ಹೆಣ್ಣು ಮಕ್ಕಳು ಗೌರಿ ಬಾಗಿನದ ದಿನದವರೆಗೆ ಬಿಚ್ಚುವುದಿಲ್ಲ. ತವರಿನಿಂದ ಬಂದ ಬಾಗಿನವನ್ನು ರುದ್ರನ ಗುಡಿಗೆ ತರುತ್ತಾರೆ. ಸೀರೆ, ಕುಪ್ಪಸ, ಬಳೆ, ಅರಿಸಿಣ, ಕುಂಕುಮ ಮತ್ತು ಐದು ಬಗೆಯ ಧಾನ್ಯಗಳನ್ನು ದೇಶದ ಗೌರಮ್ಮನಿಗೆ ಅರ್ಪಿಸುತ್ತಾರೆ. ನಂತರ ಒಬ್ಬರಿಗೊಬ್ಬರು ಮಡಿಲು ತುಂಬಿ ಪರಸ್ಪರ ಶುಭ ಕೋರುತ್ತಾರೆ.

ಒಡ್ಡೋಲಗ: ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಗೌರಿ ಬಾಗಿನಕ್ಕೆ ಒಡ್ಡೋಲಗದ ವೈಶಿಷ್ಟ್ಯವಿದೆ. ಹಬ್ಬಕ್ಕೆ ತವರಿಗೆ ಬಂದ ಹೆಣ್ಣು ಮಕ್ಕಳು ಒಡ್ಡೋಲಗದಲ್ಲಿ ಕೆರೆಯ ಬಳಿ  ಹೋಗಿ, ಗಂಗೆ ತಳದ ಮಣ್ಣು ತೆಗೆದು ಗೌರಮ್ಮನನ್ನು ರೂಪಿಸುತ್ತಾರೆ. ಮೂರು ಕಳಶ ಊಡಿಗಂಗಮ್ಮನ ಪೂಜೆ ನೆರವೇರಿಸುತ್ತಾರೆ. ಗೌರಿ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ನಂತರ ಎಲ್ಲ ಹೆಣ್ಣು ಮಕ್ಕಳೂ ತಮಗೆ ಕೊಟ್ಟ ಜೋಡು ಮರದ ಬಾಗಿನವನ್ನು ಗೌರಿಯ ಮುಂದಿಟ್ಟು ಪೂಜೆ ಸಲ್ಲಿಸುತ್ತಾರೆ. ಅಣ್ಣ– ತಮ್ಮಂದಿರಿಗೆ ಗೌರಿ ಎಳೆ ಕಟ್ಟಿ, ರಕ್ಷಣೆಯ ವಾಗ್ದಾನ ಪಡೆಯುತ್ತಾರೆ.

ಮನೆಗೊಬ್ಬ ಗೌರಮ್ಮ: ತಾಲ್ಲೂಕಿನ ಕೆಲ ಕುಟುಂಬಗಳಲ್ಲಿ ಮಗಳನ್ನೇ ಗೌರಿ ಎಂದು ಪರಿಭಾವಿಸಿ, ಜೋಡು ಮರದ ಎರಡು ಬಾಗಿನ ಕೊಡುವ ಪದ್ಧತಿ ಇದೆ. ಬಾಗಿನದಲ್ಲಿ ಪಂಚಧಾನ್ಯ, ಬಳೆ, ಹೊಸಬಟ್ಟೆ, ತೆಂಗಿನಕಾಯಿ, ಕನ್ನಡಿ, ಅರಿಶಿಣ, ಕುಂಕುಮ, ಬಾಚಣಿಗೆ, ಹಣ್ಣು, ಹೂ ಹಾಗೂ ಮನೆಯಲ್ಲಿ ಬೆಳೆದ ಸಾಮಗ್ರಿಗಳನ್ನು ಕೊಡಲಾಗುತ್ತದೆ. ಮೊದಲನೆ ಬಾಗಿನದ ಗೌರವ ಮನೆ ಮಗಳಿಗೆ ಮೀಸಲು.

ಬಾವಿ ತಳದ ಮಣ್ಣು: ಪಟ್ಟಣದ ಚೌಕಿಮಠದಲ್ಲಿ ಆಚರಿಸುವ ಮರಳು ಗೌರಮ್ಮ ಆಚರಣೆ ವಿಭಿನ್ನ. ಇಲ್ಲಿ ಗಂಗೆ– ಗೌರಿಯರನ್ನು ಒಟ್ಟಿಗೆ ಆರಾಧಿಸುವ ವೈಶಿಷ್ಟ್ಯವಿದೆ. ಮೂವರು ಮುತೈದೆಯರು ಚೌಕಿಮಠದ ಬಾವಿ ತಳದ ಮರಳು ತೆಗೆದು, ಅರಿಶಿಣದಲ್ಲಿ ಬೆರೆಸಿ ಗೌರಿ ಮೂರ್ತಿ ಮಾಡುತ್ತಾರೆ. ಅದೇ ಬಾವಿಯ ನೀರನ್ನು ಕಳಶದಲ್ಲಿ ತುಂಬಿಕೊಂಡು ಶಾಸ್ತ್ರೋಕ್ತವಾಗಿ ಮನೆಗೆ ತರುತ್ತಾರೆ.

ಬಾಗಿಲಿಗೆ ಬಂದ ಮುತೈದೆಯರ ಪಾದ ತೊಳೆದು ಆರತಿ ಮಾಡಿ ಗಂಗೆ– ಗೌರಿಯರನ್ನು ಒಳಗೆ ಕರೆಯುತ್ತಾರೆ. ಕಂಬಳಿ ಗದ್ದುಗೆ ಮಾಡಿ, ಅಕ್ಕತಂಗಿಯರನ್ನು ಒಟ್ಟಿಗೆ ಕೂರಿಸಲಾಗುತ್ತದೆ. ಬಾಗಿನದ ಸಾಮಗ್ರಿಗಳಿಂದ ಇಬ್ಬರನ್ನೂ ಅಲಂಕರಿಸಲಾಗುತ್ತದೆ ನಂತರ ಮರದ ಮೇಲೆ ಸೆರಗು ಹಾಕಿ ಬಾಗಿನ ನೀವಳಿಸಲಾಗುತ್ತದೆ. ಮಹಾಮಂಗಳಾರತಿ ಬಳಿಕ ಸೋದರಿಯರು ಬಾಗಿನ ವಿನಿಮಯ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.