ADVERTISEMENT

ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

ಎತ್ತಿನಹೊಳೆ: ನಲ್ಲೂರು, ಇರಕಸಂದ್ರದಲ್ಲಿ ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 4:50 IST
Last Updated 21 ಜನವರಿ 2017, 4:50 IST
ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ
ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ   

ಗುಬ್ಬಿ: ಸಾಮಾಜಿಕ ಪರಿಣಾಮ ಅಧ್ಯಯನ ಸಮಾಲೋಚಕರ ಸಮಿತಿ ಎತ್ತಿನಹೊಳೆ ಯೋಜನೆ ಜಾರಿ ಕುರಿತ ಗ್ರಾಮ ಸಭೆಗಳನ್ನು ಗುರುವಾರ ತಾಲ್ಲೂಕಿನ ಚೇಳೂರು ಹೋಬಳಿ ನಲ್ಲೂರು, ಇರಕಸಂದ್ರಗಳಲ್ಲಿ ನಡೆಸಿತು.

ಸಾಮಾಜಿಕ ಪರಿಣಾಮ ಅಧ್ಯಯನ ಸಮಾಲೋಚಕ ಸಿ.ಈಶ್ವರಪ್ಪ ಮಾತನಾಡಿ, ಎತ್ತಿನ ಹೊಳೆ ಜಾರಿಯಾದರೆ ಈ ಭಾಗದ ಕೆರೆಗಳಿಗೆ ಸಾಕಷ್ಟು ನೀರು ಸಿಗಲಿದೆ. ಈ ಯೋಜನೆಯಿಂದ ಆಸ್ತಿಪಾಸ್ತಿ ನಷ್ಟವಾದರೆ ಪರಿಹಾರ ಸಿಗಲಿದೆ. ಸರ್ಕಾರಿ ದಾಖಲೆ ಪ್ರಕಾರ ಭೂಮಿಗೆ ಇರುವ ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರವನ್ನು ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡಲಾಗುವುದು. ತಾಲ್ಲೂಕಿನ ಹೆಚ್ಚು ಕೆರೆಗಳಿಗೆ ನೀರು ಲಭ್ಯವಾಗಲಿದ್ದು, ಈ ಯೋಜನೆಗೆ ಸಹಕರಿಸಿ ಎಂದು ಮನವಿ ಮಾಡಿದರು.

ಎತ್ತಿನಹೊಳೆ ನೀರಾವರಿ ತಜ್ಞ ಸತೀಶ್ ಚಂದ್ರ ಮಾತನಾಡಿ, ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ಜಾರಿಗೆ ಮುನ್ನ ಗ್ರಾಮಸ್ಥರುಗಳು ಸಮಗ್ರ ಮಾಹಿತಿ ಪಡೆದಿರಬೇಕು. ಇಲ್ಲಿನ ಆರ್ಥಿಕ ಸ್ಥಿತಿ, ವಿದ್ಯಾರ್ಹತೆ, ದುರ್ಬಲ ಕುಟುಂಬಗಳು ಯೋಜನೆಯ ಮಾಹಿತಿ ತಿಳಿದು, ಇದರಿಂದ ಅನುಕೂಲ, ಅನಾನುಕೂಲದ ಬಗ್ಗೆ ನೀವೆ ಚರ್ಚಿಸಿ ಎಂದು ತಿಳಿ ಹೇಳಿದರು.

ಗ್ರಾಮಸ್ಥರುಗಳು ನೀರು ಸಂಗ್ರಹವಾಗುವ ಮಾಹಿತಿ ಪಡೆದರು. ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದರು. ಹಾಗೂ ಅನಿಸಿಕೆ ಕುರಿತ ಅಹವಾಲುಗಳನ್ನು ಪಡೆಯಲಾಯಿತು.

ಹೇಮಾವತಿ ನೀರು ಹರಿಯದ ಚೇಳೂರು, ಹಾಗಲವಾಡಿ, ನಿಟ್ಟೂರು ಭಾಗದ ಕೆರೆಗಳಿಗೆ ಕುಡಿಯುವ ನೀರು ಹರಿಸಿದರೆ ಮಾತ್ರ ಭೂಮಿ ಬಿಟ್ಟುಕೊಡುತ್ತೇವೆ ಎಂದು ನಲ್ಲೂರು ಗ್ರಾಮಪಂಚಾಯಿತಿ ಮಾಜಿ ಸದಸ್ಯ ಹೇಮಂತ್ ಆಗ್ರಹಿಸಿದರು.

ಈ ಯೋಜನೆ ಜಾರಿಯಿಂದ ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಉದ್ಯೋಗ ನೀಡಬೇಕು. ದುರ್ಬಲ ವರ್ಗದವರಿಗೆ ಹೆಚ್ಚು ಪರಿಹಾರ ನೀಡಬೇಕು ಎಂದು ಸ್ಥಳೀಯರು ಅಗ್ರಹಿಸಿದರು. 

ಸಭೆಯಲ್ಲಿ ಎತ್ತಿನ ಹೊಳೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಪ್ರಸಾದ, ವಿಶೇಷ ಭೂಸ್ವಾದೀತ ಕಾರ್ಯಾಲಯದ ಅಧಿಕಾರಿಗಳಾದ ವೇಣುಗೋಪಾಲ, ಹರೀಶ್, ಇರಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಲನೇತ್ರ, ತಜ್ಞರಾದ ಶಿಲ್ಪ, ಶಿವಲಿಂಗಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.