ADVERTISEMENT

ಅಧಿಕಾರಿಗಳಿಗೆ ತರಾಟೆ: ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 6:32 IST
Last Updated 14 ಮೇ 2017, 6:32 IST
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದ ಬಿ.ಎಸ್. ಯಡಿಯೂರಪ್ಪ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದ ಬಿ.ಎಸ್. ಯಡಿಯೂರಪ್ಪ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.   

ಬೈಂದೂರು: ರಾಷ್ಟ್ರೀಯ ಹೆದ್ದಾರಿ, ಮೀನುಗಾರಿಕಾ ಬಂದರು ಮತ್ತು ರಸ್ತೆಗಳು, ವಿದ್ಯುತ್ ಸಂಪರ್ಕ ಇತ್ಯಾದಿ ನಿರ್ವಹಣೆಯಲ್ಲಿ ವೈಫಲ್ಯ ಆಗಿದೆ ಎಂದು ಸಂಸದ ಬಿ. ಎಸ್‌.ಯಡಿಯೂರಪ್ಪ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು ಕಾಮಗಾರಿಗಳ ದೋಷಗಳನ್ನು ಅವರ ಗಮನಕ್ಕೆ ತಂದರು.

ಈ ವೇಳೆ ಅಧಿಕಾರಿ ಗಳ ವಿರುದ್ಧ ಗರಂ ಆದ ಸಂಸದರು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು. ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ನಿಯಮದಂತೆ ಪರಿಹಾರ ನೀಡದೆ ಕಾಮಗಾರಿ ನಡೆಸಬಾರದು ಎಂದು ಗುತ್ತಿಗೆದಾರರ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸಿಆರ್‌ಎಫ್ ಯೋಜನೆಯಡಿ ನಾಲ್ಕು ಸೇತುವೆಗಳು ಮಂಜೂರಾಗಿವೆ. ಅವು ಗಳಿಗೆ ಪ್ರಥಮ ಹಂತದಲ್ಲಿ ಬಿಡುಗಡೆ ಯಾದ ಅನುದಾನ ಸಾಕಾಗದ ಕಾರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ತಿಂಗಳೊಳಗೆ ದ್ವಿತೀಯ ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಆ ಬಳಿಕ ಆರಂಭಿಸಲಾಗು ವುದು ಎಂದು ಅಧಿಕಾರಿಗಳು ತಿಳಿಸಿದರು. 

‘ಗಂಗೊಳ್ಳಿಯಲ್ಲಿ ₹ 102 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬಂದರು ಕಾಮಗಾರಿ ತೀರ ಕಳಪೆಯಾಗಿದೆ, ಅಧಿಕಾರಿಗಳು ಶಾಸಕರ ಕೈಗೊಂಬೆ ಯಂತೆ  ವರ್ತಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ ದೂರಿದರು. ಉತ್ತರಿಸಿದ ಎಂಜಿನಿಯರ್ ನಾಗರಾಜ, ಕಾಮಗಾರಿಯನ್ನು ಪುಣೆಯ ಕೇಂದ್ರ ಜಲಶಕ್ತಿ ಸಂಶೋಧನಾ ಸಂಸ್ಥೆ ನೀಡಿದ ವಿನ್ಯಾಸದಂತೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಕರಾವಳಿಯ ಮೀನುಗಾರಿಕಾ ರಸ್ತೆ ಸಂಪೂರ್ಣ ನಶಿಸುತ್ತಿರುವುದರ ಬಗ್ಗೆ ಅವರು ಕೇಳಿದ ವಿವರಣೆಗೆ ಅಧಿಕಾರಿ ಗಳು ಈ ಬಗ್ಗೆ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ. ಅವು ಶೀಘ್ರ ಮಂಜೂ ರಾಗಬಹುದು ಎಂದು ಉತ್ತರಿಸಿದರು.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮನೆಗೆಗಳಿಗೆ ಕೇಂದ್ರದ ದೀನ್‌ದಯಾಳ್ ವಿದ್ಯುದೀಕರಣ ಯೋಜನೆಯಡಿ ಕಲ್ಪಿಸಿದ ವಿದ್ಯುತ್ ಸಂಪರ್ಕದ ಪ್ರಗತಿ ವಿಚಾರಿಸಿದರು. ಈ ಯೋಜನೆಯಡಿ 600 ಮನೆಗಳನ್ನು ಗುರುತಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.

ಸಂಸದರು ಇನ್ನೊಮ್ಮೆ ಪರಿಶೀಲನೆ ನಡೆಸಿ ಎಲ್ಲ ವಿದ್ಯುತ್ ವಂಚಿತ ಕುಟುಂಬಗಳಿಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಿ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ನೆರವು ಪಡೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಸುನೀಲ್ ಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.