ADVERTISEMENT

‘ಆಂಗ್ಲ ಮಾಧ್ಯಮ: ಮನಃಸ್ಥಿತಿ ಬದಲಾಗಲಿ’

ಉದ್ಯಾವರ ಹಿಂದೂ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:59 IST
Last Updated 17 ಜನವರಿ 2017, 8:59 IST
‘ಆಂಗ್ಲ ಮಾಧ್ಯಮ: ಮನಃಸ್ಥಿತಿ ಬದಲಾಗಲಿ’
‘ಆಂಗ್ಲ ಮಾಧ್ಯಮ: ಮನಃಸ್ಥಿತಿ ಬದಲಾಗಲಿ’   

ಉಡುಪಿ: ಆಂಗ್ಲ ಮಾಧ್ಯಮ ಶಾಲೆಗಳ ಸ್ಪರ್ಧೆಯನ್ನು ಎದುರಿಸುವುದು ಸುಲಭದ ಮಾತಲ್ಲ, ಕನ್ನಡ ಶಾಲೆಗಳು ಇಂತಹ ಎಲ್ಲ ಆತಂಕಗಳನ್ನು ಮೀರಿ ಬೆಳೆಯುತ್ತಿರು ವುದು ಆಶಾದಾಯಕ ಬೆಳವಣಿಗೆ ಎಂದು ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್‌. ಸಾಮಗ ಹೇಳಿದರು.

ಇತ್ತೀಚೆಗೆ ನಡೆದ ‘ವರ್ಷದ ಹರ್ಷ 156’ ಉದ್ಯಾವರ ಹಿಂದೂ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂ ಭದ ಬೆಳಗಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯ ತನ್ನ ಜೀವನದಲ್ಲಿ ತೋರ್ಪಡಿಸುವ ಸಣ್ಣ– ಸಣ್ಣ ವರ್ತನೆಗಳು ಆತನ ಸಂಸ್ಕೃತಿಯನ್ನು ತೋರಿಸುತ್ತವೆ. ಇಂತಹ ವರ್ತನೆಗಳನ್ನು ತಿದ್ದುವ ಕೆಲಸವನ್ನು ಬಾಲ್ಯದಲ್ಲಿಯೇ ಮಾಡ ಬೇಕು. ಈ ಕೆಲಸವನ್ನು ಪ್ರಾಥಮಿಕ ಶಾಲೆಗಳು ಪರಿಣಾಮಕಾರಿಯಾಗಿ ಮಾಡಿದಾಗ ಉತ್ತಮ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಜಿ. ಪ್ರೇಮನಾಥ ಮಾತನಾಡಿ, ಪೋಷಕರ ಬದಲಾದ ಮನಸ್ಥಿತಿಯಿಂದಾಗಿ ಇಂದು ಆಂಗ್ಲ ಮಾಧ್ಯಮ ಶಾಲೆಗಳು ವಿಜೃಂಭಿಸುತ್ತಿವೆ. ಇದನ್ನು ತಪ್ಪು ಎಂದು ಹೇಳಲಾಗದು. ಆಂಗ್ಲ ಮಾಧ್ಯಮ ಶಾಲೆಗಳ ಸಂಪನ್ಮೂಲಗಳು ಹೇರಳವಾಗಿದ್ದು, ಇದರ ಕೊರತೆ ಎದುರಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳು ಸೊರಗುತ್ತಿವೆ. ಆಂಗ್ಲ ಮಾಧ್ಯಮ ಶಾಲೆಗಳೊಂದಿಗೆ ಕನ್ನಡ ಮಾಧ್ಯಮ ಶಾಲೆಗಳು ಸ್ಪರ್ಧಿಸುವುದು ಕಷ್ಟಸಾಧ್ಯವಾಗಿದೆ.

ಇಂತಹ ಪರಿಸ್ಥಿತಿಯಲ್ಲಿಯೂ ಉದ್ಯಾವರದ ಶಾಲೆ ಬೆಳೆದು ನಿಂತಿರುವುದನ್ನು ನೋಡಿದರೆ ಈ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಅಂದಾಜಿಸಬಹುದು. ಯೋಚನೆ ಮತ್ತು ಯೋಜನೆ ಇರುವ ಆಡಳಿತ ಮಂಡಳಿ ಮತ್ತು ಶಿಕ್ಷಕರಿಂದ ಮಾತ್ರ ಇಂತಹ ಸಾಧನೆ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಹಲೀಮಾ ಸಾಬ್ಜು ಆಡಿಟೋರಿಯಂನ ಆಡಳಿತ ನಿರ್ದೇಶಕ ಅಬ್ದುಲ್‌ ಜಲೀಲ್‌ ಸಾಹೇಬ್‌, ಉದ್ಯಾವರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಿಯಾಝ್‌ ಪಳ್ಳಿ, ಶಾಲೆಯ ರಕ್ಷಕ– ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್‌, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಗಣೇಶ್‌, ವಿದ್ಯಾರ್ಥಿ ನಾಯಕ ವಿಘ್ನೇಶ್‌ ಜಿ ಕೋಟ್ಯಾನ್‌ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಕಾರಂತ ಸ್ವಾಗತಿಸಿದರು. ಸಂಚಾ ಲಕ ಉದ್ಯಾವರ ನಾಗೇಶ್ ಕುಮಾರ್‌ ಪ್ರಾಸ್ತವಿಕವಾಗಿ ಮಾತನಾಡಿ ದರು. ಹಿರಿಯ ಶಿಕ್ಷಕಿ ರತ್ನಾವತಿ ನಿರೂಪಿಸಿ, ಶಿಕ್ಷಕಿ ಹೇಮಲತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.