ADVERTISEMENT

ಒಂದೇ ವೇದಿಕೆಯಲ್ಲಿ 5 ಕ್ಷೇತ್ರದ ಅಭ್ಯರ್ಥಿಗಳು

ಹಮ್ ಪಾಂಚ್’ ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರ ಪಠಣ

ಎಂ.ನವೀನ್ ಕುಮಾರ್
Published 20 ಏಪ್ರಿಲ್ 2018, 10:32 IST
Last Updated 20 ಏಪ್ರಿಲ್ 2018, 10:32 IST

ಉಡುಪಿ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ಜೊತೆಗೆ ಉಳಿದ ಎರಡು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲು ಮುಂದಾಗಿರುವ ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ.

ಐದೂ ಕ್ಷೇತ್ರಕ್ಕೆ ಪಕ್ಷ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಡುಪಿಗೆ ಹಾಲಿ ಶಾಸಕ ಹಾಗೂ ಸಚಿವ ಪ್ರಮೋದ್ ಮಧ್ವರಾಜ್, ಕಾಪುಗೆ ಹಾಲಿ ಶಾಸಕ ವಿನಯಕುಮಾರ್ ಸೊರಕೆ ಹಾಗೂ ಬೈಂದೂರಿಗೆ ಈಗಿನ ಶಾಸಕ ಕೆ. ಗೋಪಾಲ ಪೂಜಾರಿ ಅಭ್ಯರ್ಥಿಯಾಗಿದ್ದಾರೆ. ಕುಂದಾಪುರಕ್ಕೆ ಕಾಂಗ್ರೆಸಿನ ಕಾರ್ಮಿಕ ಸಂಘಟನೆ ಇಂಟಕ್‌ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅಭ್ಯರ್ಥಿಯಾದರೆ, ಕಾರ್ಕಳದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಹುರಿಯಾಳು.

ಒಂದೇ ವೇದಿಕೆಯಲ್ಲಿ ಎಲ್ಲ ಅಭ್ಯರ್ಥಿಗಳು: ಪ್ರಮೋದ್ ಮಧ್ವರಾಜ್ ಅವರು ಇದೇ 23ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಉಡುಪಿಯಲ್ಲಿ ಮುಖಂಡರ, ಕಾರ್ಯಕರ್ತರ ಹಾಗೂ ಜನರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸೊರಕೆ, ಗೋಪಾಲ ಪೂಜಾರಿ, ರಾಕೇಶ್ ಮಲ್ಲಿ ಹಾಗೂ ಗೋಪಾಲ ಭಂಡಾರಿ ಭಾಗವಹಿಸುವರು. ಅಲ್ಲದೆ ಬೈಂದೂರು ಹಾಗೂ ಕಾಪುವಿನಲ್ಲಿ ನಡೆಯುವ ಇಂತಹುದೇ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಪ್ರಮೋದ್ ಹೇಳಿದ್ದಾರೆ.

ADVERTISEMENT

ಆ ಮೂಲಕ ಪರಸ್ಪರರ ಸಹಕಾರದಿಂದ ಎಲ್ಲರೂ ಗೆಲುವಿನ ದಡ ಮುಟ್ಟಲು ಮುಂದಾಗಿದ್ದಾರೆ. ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದು ಆಶೀರ್ವಾದ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ದುಡಿಯುತ್ತೇವೆ ಎಂಬ ಸಂದೇಶವನ್ನು ಆ ವೇದಿಕೆಯಲ್ಲಿ ನೀಡಲಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು. ಸರ್ಕಾರ ಮೂರೂವರೆ ವರ್ಷ ಪೂರೈಸಿದ ನಂತರ ಸಚಿವ ಸಂಪುಟ ಪುನರ್ ರಚನೆಯಾದಾಗ ಅವರು ಸಚಿವ ಸ್ಥಾನ ಕಳೆದುಕೊಂಡರು. ಮೊದಲ ಬಾರಿ ಶಾಸಕರಾದರೂ ಪ್ರಮೋದ್ ಆಶ್ಚರ್ಯಕರ ರೀತಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿದ್ದರು. ಮೀನುಗಾರ ಸಮಾಜದ ಹಿರಿಯ ಮುಖಂಡ ಬಾಬುರಾವ್ ಚಿಂಚನಸೂರ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಅದೇ ಸಮಾಜಕ್ಕೆ (ಮೊಗವೀರ) ಸೇರಿದ ಪ್ರಮೋದ್ ಅವರಿಗೆ ಸ್ಥಾನ ನೀಡಲಾಗಿದೆ ಎಂದು ಸಮರ್ಥಿಸಿಕೊಳ್ಳಲಾಗಿತ್ತು.

ಈ ಬೆಳವಣಿಗೆ ಸೊರಕೆ ಹಾಗೂ ಪ್ರಮೋದ್ ಅವರ ಮಧ್ಯೆ ಸ್ವಲ್ಪ ವಿರಸ ಮೂಡಲು ಕಾರಣವಾಗಿತ್ತು. ಆ ನಂತರ ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ವಿರಳ. ಆದ್ದರಿಂದ ಭಿನ್ನಾಭಿಪ್ರಾಯ ಇದೆ ಎಂಬ ಸುದ್ದಿ ಜೋರಾಗಿತ್ತು. ಆದರೆ ಚುನಾವಣೆಯ ನೆಪದಲ್ಲಿ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ನಾಲ್ಕು ಬಾರಿ ಶಾಸಕರಾದರೂ ಗೋಪಾಲ್ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಇದು ಸಹ ಸಹಜವಾಗಿಯೇ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ನಂತರ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆ ನೀಡಿ ಸಮಾಧಾನಪಡಿಸಲಾಗಿತ್ತು.

ಬೈಂದೂರಿನಲ್ಲಿ ನಡೆದಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪೂಜಾರಿ ಅವರು ಸಚಿವರಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಮುಂದಿನ ಬಾರಿ ಆಗುತ್ತಾರೆ’ ಎಂಬ ಭರವಸೆಯನ್ನೂ ನೀಡಿದ್ದರು.

ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಸಹ ಯಾವುದೇ ಗೊಂದಲ ಆಗಿಲ್ಲ. ರಾಕೇಶ್ ಮಲ್ಲಿ ಅವರ ಆಯ್ಕೆ ಬಗ್ಗೆ ಅಪಸ್ವರ ಕೇಳಿ ಬಂದಿಲ್ಲ. ಆದರೆ ಕಾರ್ಕಳದಲ್ಲಿ ಮಾತ್ರ ತೀರ ಭಿನ್ನ ಪರಿಸ್ಥಿತಿ ಇದೆ. ಅಲ್ಲಿ ಟಿಕೆಟ್ ವಂಚಿತ ಉದಯ ಶೆಟ್ಟಿ ಮುನಿಯಾಲು ಬೆಂಬಲಿಗರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಉದಯ ಶೆಟ್ಟಿ ಅವರಿಗೆ ಬಿ ಫಾರಂ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ದಾಳವೊಂದನ್ನು ಉರುಳಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.