ADVERTISEMENT

ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ಕಾರ್ಕಳ ತಾಲ್ಲೂಕಿನಲ್ಲಿ ಜಲಪೂರಣ ಅಭಿಯಾನಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:52 IST
Last Updated 15 ಮೇ 2017, 6:52 IST
ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ
ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ   
ಪಡುಬಿದ್ರಿ: ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಯ ನಿಟ್ಟಿನಲ್ಲಿ ಜೂನ್- ಜುಲೈ ತಿಂಗಳಿನಲ್ಲಿ ವ್ಯಾಪಕ ಜಲಪೂರಣ ಅಭಿಯಾನವನ್ನು ಕಾರ್ಕಳ ತಾಲ್ಲೂಕಿನಲ್ಲಿ ನಡೆಸಲು  ಚಿಂತಿಸಲಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್ ಹೇಳಿದರು.
 
ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ಇನ್ನಾ ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಇನ್ನಾ ಕಾಂಜಾರಕಟ್ಟೆ ಸಾರ್ವಜನಿಕ ಕೆರೆಯ ಹೂಳು ತೆಗೆಯುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಕಾರ್ಕಳ ತಾಲ್ಲೂಕಿನ ಎಲ್ಲ ಸರ್ಕಾರಿ ಕೊಳವೆಬಾವಿಗಳಿಗೆ ಮರು ಜಲಪೂರಣ ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗಿದೆ. ನಮ್ಮೂರಿನ ಎಲ್ಲ ಕೆರೆ ಬತ್ತಿ ಹೋಗಿದೆ. ಇಂತಹ ಸಂದರ್ಭದಲ್ಲಿ ಭವಿಷ್ಯಕ್ಕೆ ಆಗುವ ಅಪಾಯವನ್ನು ಗಣನೆಗೆ ಇಟ್ಟುಕೊಂಡು ಕೆರೆಗಳಿಂದ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
 
ಜಿಲ್ಲಾ ಪಂಚಾಯಿತಿ ಸದಸ್ಯೆ ರೇಶ್ಮಾ ಉದಯಕುಮಾರ್ ಶೆಟ್ಟಿ ಮಾತನಾಡಿ, ‘ತುಂಬಿ ತುಳುಕುತ್ತಿದ್ದ ಕೆರೆಗಳು ಇತ್ತೀಚಿನ ದಿನಗಳಲ್ಲಿ ಬತ್ತಿ ಹೋಗಿವೆ. ಉಡುಪಿ ಜಿಲ್ಲೆಯನ್ನೂ ಬರ ಪೀಡಿತ ಜಿಲ್ಲೆಯೆಂದು ಘೋಷಿಲಾಗಿದೆ. ಇಂಥ ದುರಂತದಿಂದ ಪಾರಾಗಬೇಕಾದರೆ, ಕನಿಷ್ಠ ಕುಡಿಯುವ ನೀರಿನ ಪೂರೈಕೆಗಾದರೂ ಕೆರೆಗಳಿಂದ ಹೂಳೆತ್ತುವ ಕೆಲಸಗಳನ್ನು ಮಾಡಬೇಕು ಮತ್ತು ಅಂತರ್ಜಲ ಸುಧಾರಣಾ ಯೋಜನೆ ಅಳವಡಿಸಬೇಕು’ ಎಂದರು.
 
ಎಬಿಸಿಡಿ ಟ್ರಸ್ಟ್‌ನ ಚಂದ್ರಕಾಂತ್ ರಾವ್, ಕೆ.ಸಿ ಕಾಮತ್, ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ವಸಂತಿ ಮೂಲ್ಯ, ಜಯರಾಮ ಸಾಲ್ಯಾನ್, ಪಾಶ್ರ್ವನಾಥ ಜೈನ್, ಆಶಾ ದೇವೇಂದ್ರ ಶೆಟ್ಟಿ, ಗೋಪಾಲ ಮೂಲ್ಯ ಇದ್ದರು.  ಇನ್ನಾ ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಭಟ್  ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.