ADVERTISEMENT

ಗುಂಡೇಟು ಪ್ರಕರಣ :ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 9:16 IST
Last Updated 23 ಏಪ್ರಿಲ್ 2014, 9:16 IST

ಉಡುಪಿ: ‘ಶೃಂಗೇರಿಯ ತನಿಕೋಡು ಚೆಕ್‌ಪೋಸ್ಟ್‌ ಬಳಿ ಎಎನ್‌ಎಫ್‌ ಸಿಬ್ಬಂದಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿ ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ಉಡುಪಿ ತಾಲ್ಲೂಕು ಸಮಿತಿ ಸದಸ್ಯರು ಬನ್ನಂಜೆಯ ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಾನುವಾರ ಸಾಗಾಟ ಅಕ್ರಮವಾಗಿದ್ದರೆ ಕಾನೂನು ಕ್ರಮ ಜರುಗಿಸಬೇಕಿತ್ತು. ಕಬೀರ್‌ನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿಯನ್ನು ಬಂಧಿಸಬೇಕು. ಮೃತ ಕಬೀರ್‌ ಕುಟುಂಬದವರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಬೀರ್‌ ಕುಟುಂಬದವರು ಘಟನೆ ನಡೆದ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು. ಸರ್ಕಾರ ಘೋಷಿಸಿದ ಪರಿಹಾರ ಹಾಗೂ ತನಿಖೆಗೆ ಒಳಪಡಿಸಿರುವುದನ್ನು ವಿರೋಧಿಸಿ ಹೇಳಿಕೆ ನೀಡಿದ ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್‌ ಕ್ರಮವನ್ನು ಸಿಪಿಎಂ ಪಕ್ಷ ವಿರೋಧಿಸುತ್ತದೆ. ಘಟನೆಯನ್ನು ಅವಲೋಕಿಸಿದಾಗ ಇದೊಂದು ಪೂರ್ವ ಯೋಜಿತ ಎಂದು ಗೊತ್ತಾಗುತ್ತದೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣವನ್ನು ಕೋಮುವಾದಿಕರಣ ಮಾಡಲು ಹೊರಟ ಬಿಜೆಪಿ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಅಲ್ಪಸಂಖ್ಯಾತರನ್ನು ಗುರಿ ಮಾಡಿ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿಯೂ ಇಂತಹ ಘಟನೆ ನಡೆಯುತ್ತಿರುವುದು ಅಮಾನವೀಯ. ಅಲ್ಪ ಸಂಖ್ಯಾತರ, ದಲಿತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಪಕ್ಷ ಕಾರ್ಯದರ್ಶಿ ಪಿ.ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ವಿಠಲ ಪೂಜಾರಿ, ಕೆ.ಲಕ್ಷ್ಮಣ್‌, ಸಂಜೀವ ನಾಯಕ್‌, ಉಮ್ಮರ್‌, ದಯಾನಂದ ಮಲ್ಪೆ, ವಿದ್ಯಾರಾಜ್‌, ರಾಮ ಕಾರ್ಕಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.