ADVERTISEMENT

ಗೋಶಾಲೆ ತೆರೆಯಿರಿ: ಪ್ರಮೋದ್‌ ಸವಾಲು

ಪ್ರವೀಣ್ ಪೂಜಾರಿ ಹತ್ಯೆ--– ಬಿಲ್ಲವ ಸಮುದಾಯದಿಂದ ಖಂಡನೆ, ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 6:04 IST
Last Updated 29 ಆಗಸ್ಟ್ 2016, 6:04 IST

ಬ್ರಹ್ಮಾವರ: ಅಶಕ್ತ ಗೋವುಗಳನ್ನು ರಕ್ಷಿಸಬೇಕೇ ವಿನಾ, ಗೋರಕ್ಷಣೆ ಹೆಸರಿನಲ್ಲಿ ಹಲ್ಲೆ, ಕೊಲೆ ಅಕ್ಷಮ್ಯ ಅಪರಾಧ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಬ್ರಹ್ಮಾವರ ನಾರಾಯಣಗುರು ಸಭಾ ಭವನದಲ್ಲಿ ಭಾನುವಾರ ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿ ಸಮಸ್ತ ಬಿಲ್ಲವ ಸಮುದಾಯದ ನೇತೃತ್ವದಲ್ಲಿ ನಡೆದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ಗೋರಕ್ಷಕರು ಗ್ರಾಮ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯುವ ಮೂಲಕ ಗೋವುಗಳನ್ನು ರಕ್ಷಿಸುವ ಕೆಲಸ ಮಾಡಬೇಕೇ ಹೊರತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು ಎಂದ ಅವರು, ಪ್ರವೀಣ್ ಪೂಜಾರಿ ಕುಟುಂಬಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.

ಪ್ರಧಾನ ಭಾಷಣ ಮಾಡಿದ ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ, ಗೋಹತ್ಯೆ ಎಷ್ಟು ಪಾಪವೋ ಅಷ್ಟೇ ಮಾನವನ ಹತ್ಯೆ ಕೂಡಾ ಆಗಿದೆ. ಪ್ರವೀಣ್ ಪೂಜಾರಿ ಜತೆಯಲ್ಲಿ ಮಾನವೀಯತೆಯ ಹತ್ಯೆಯೂ ಕೂಡಾ ಆಗಿದೆ. ಬಿಲ್ಲವ ಸಮಾಜದ ವ್ಯಕ್ತಿಗಳು ಹತ್ಯೆಯಾದ ಸಂದರ್ಭದಲ್ಲಿ ಎಲ್ಲಿಯೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಸರ್ಕಾರ ಮಾನವೀಯತೆ ದೃಷ್ಟಿಯಲ್ಲಾದರೂ ಪರಿಹಾರ ನೀಡಬೇಕಿತ್ತು ಎಂದರು.

ದಕ್ಷಿಣ ಕನ್ನಡದ ಮೂಲ ನಿವಾಸಿಗಳೆಂದೇ ಬಿಂಬಿತವಾದ ಬಿಲ್ಲವ ಸಮುದಾಯದ ಜನತೆ ಸಂಘಟಿತ ರಾಗಿಲ್ಲ. ಬಿಲ್ಲವ ಸಮಾಜಕ್ಕೆ ಸಮಾಜಕ್ಕೆ ಅನ್ಯಾಯವಾದರೂ ಇದನ್ನು ಪ್ರತಿಭಟಿ ಸುವ ಗೋಜಿಗೆ ಹೋಗದಿರುವುದು ವಿಷಾದದ ಸಂಗತಿ. ಮುಂದೆ ಘರ್ಷಣೆ, ಸಂಕಷ್ಟಕ್ಕೆ ಕಾರಣವಾಗುವ ಮೊದಲು ಎಲ್ಲರೂ ಜಾಗೃತರಾಗುವುದು ಒಳಿತು ಎಂದು ಹೇಳಿದರು.

ಶಾಸಕರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್ ಅವರು ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿ, ಆರೋಪಿಗಳ ಕಠಿಣ ಶಿಕ್ಷೆಗೆ ಆಗ್ರಹಿಸಿದರು. ಸಭೆಯಲ್ಲಿ ಪ್ರವೀಣ್ ಪೂಜಾರಿ ಅಮಾನವೀಯ ಹತ್ಯೆಗೆ ಖಂಡನೆ, ಬಿಲ್ಲವ ಸಮಾಜದ ಜಾಗೃತಿ ಹಾಗೂ ಮೃತರ ಕುಟುಂಬಕ್ಕೆ ಸರ್ಕಾರದಿಂದ  ಪರಿಹಾರ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.

ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಸ್ವಾಗತಿಸಿ ದರು. ಕೊಕ್ಕರ್ಣೆ ಬಿಲ್ಲವ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೊಕ್ಕರ್ಣೆ ಸಂಜೀವ ಮಾಸ್ಟರ್ ವಂದಿಸಿದರು. ದಯಾನಂದ ಉಪ್ಪೂರು  ನಿರೂಪಿಸಿದರು. ರಾಜಕೀಯ ರಹಿತವಾದ ಈ ಸಭೆಯಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.