ADVERTISEMENT

ಜಾತ್ಯತೀತ ಭಾಷೆಯಾಗಿ ಸಂಸ್ಕೃತ ಬೆಳೆಸಿ

ಸಂಸ್ಕೃತ ಭಾರತೀಯ ಅಧಿವೇಶನ ಸಮಾರೋಪ: ಚನ್ನಸಿದ್ಧರಾಮ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:30 IST
Last Updated 9 ಜನವರಿ 2017, 9:30 IST
ಉಡುಪಿ: ಸಂಸ್ಕೃತ ಭಾಷೆಯನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಜಾತ್ಯತೀತ ಭಾಷೆಯನ್ನಾಗಿ ಬೆಳೆಸಬೇಕು ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧ ರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
 
ಉಡುಪಿಯ ರಾಜಾಂಗಣದಲ್ಲಿ ಭಾನುವಾರ ನಡೆದ ಸಂಸ್ಕೃತ ಭಾರತಿ ಅಖಿಲ ಭಾರತೀಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 
 
ಸಂಸ್ಕೃತ ಭಾಷೆ ದೇಶದ ಭಾಷೆ ಮಾತ್ರವಲ್ಲ, ದೇಶದ ಸಂಸ್ಕೃತಿಯ ಭಾಷೆಯೂ ಹೌದು. ಈ ಭಾಷೆ ಇಲ್ಲದೆ ದೇಶದ ಸಂಸ್ಕೃತಿಯನ್ನು ಅರಿಯಲು ಸಾಧ್ಯವಿಲ್ಲ. ಸಂಸ್ಕೃತ ಮೃತ ಭಾಷೆಯಲ್ಲ. ಅದು ಎಲ್ಲ ಭಾಷೆಗಳ ಪಿತೃ. ಇದರ ಅಧ್ಯಯನದಿಂದ ಪರಮಾನಂದ ಅಮೃತ ಸಿಗುತ್ತದೆ ಎಂದರು.
 
ಸಂಸ್ಕೃತ ವಿಶ್ವದ ಎಲ್ಲ ಭಾಷೆಗಳಿ ಗಿಂತಲೂ ಪೂಜ್ಯವಾದ ಭಾಷೆ. ಇದರ ಅನೇಕ ಶಬ್ದಗಳನ್ನು ವಿವಿಧ ಭಾಷೆಗಳು ಸ್ವೀಕರಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷೆಯ ಮೇಲೆ ಜನರ ಆಕರ್ಷಣೆ ಕಡಿಮೆಯಾಗುತ್ತಿದೆ. ಇದನ್ನು ಸರಿದೂಗಿಸುವ ಕೆಲಸವನ್ನು ಸಂಸ್ಕೃತ ಭಾರತಿ ಮಾಡುತ್ತಿದೆ ಎಂದರು. 
 
ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಸಂಸ್ಕೃತಿ ಆತ್ಮವಾದರೆ, ಸಂಸ್ಕೃತ ಶರೀರ ಇದ್ದಂತೆ. ಸಂಸ್ಕೃತ ಇಲ್ಲದೆ ಸಂಸ್ಕೃತಿಯ ಅಭಿವ್ಯಕ್ತಿ ಆಗಲು ಸಾಧ್ಯವಿಲ್ಲ. ಸಂಸ್ಕೃತದ ಅಭಾವ ಆದರೆ, ಸಂಸ್ಕೃತಿಯ ಅಭಾವ ಆದ ಹಾಗೆ. ಹಾಗಾಗಿ ದೇಶದ ಸಂಸ್ಕೃತಿಯನ್ನು ಉಳಿಸಬೇಕಾದರೆ, ಸಂಸ್ಕೃತ ಭಾಷೆಯ ರಕ್ಷಣೆ ಅವಶ್ಯ ಎಂದು ಅಭಿಪ್ರಾಯಪಟ್ಟರು. 
 
ಡಾ. ಎಚ್‌.ಆರ್‌. ವಿಶ್ವಾಸ್‌ ಅವರ ‘ಸರಳ ಪಂಚತಂತ್ರಮ್‌’ ಮತ್ತು ‘ಅರ್ದ ಜರತಿ’ ಗ್ರಂಥ ಬಿಡುಗಡೆಗೊಳಿಸ ಲಾಯಿತು. ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸ್ವಾಗತ ಸಮಿತಿಯ ಅಧ್ಯಕ್ಷ ವಿನಯ್‌ ಹೆಗ್ಡೆ, ಸಂಸ್ಕೃತ ಭಾರತಿಯ ಅಧ್ಯಕ್ಷ ಭಕ್ತವತ್ಸಲ, ಅಖಿಲ ಭಾರತಿಯ ಪ್ರಚಾರ್‌ ಪ್ರಮುಖ್‌ ಶ್ರೀಶದೇವ ಪೂಜಾರಿ, ಅಧಿವೇಶನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಎಂ.ಬಿ. ಪುರಾಣಿಕ್ ಇದ್ದರು.
 
***
ಸಂಸ್ಕೃತ ಭಾಷೆ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುತ್ತದೆ. ಭಾಷೆ, ಸಂಪ್ರದಾಯ ಭಿನ್ನವಾಗಿದ್ದರೂ, ಸಂಸ್ಕೃತಿ ಒಂದೇ ಆಗಿರಬೇಕು.
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.