ADVERTISEMENT

ಜಿಎಸ್‌ಟಿಯಿಂದ ಜಿಡಿಪಿ ಹೆಚ್ಚಳ ನಿಶ್ಚಿತ

ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ವೈ.ಸಿ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 6:38 IST
Last Updated 22 ಅಕ್ಟೋಬರ್ 2016, 6:38 IST
ಮಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಬಂದ ಒಂದು ವರ್ಷದೊಳಗೆ ಭಾರತದ ನಿವ್ವಳ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಪ್ರಮಾಣದಲ್ಲಿ ಶೇಕಡ 1ರಿಂದ ಶೇ 1.5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಸಿ.ಶಿವಕುಮಾರ್ ಹೇಳಿದರು.
 
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಜಿಎಸ್‌ಟಿ ಕುರಿತ ಕಾರ್ಯಾಗಾರ ಉದ್ಘಾ ಟಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ಜಾರಿಯಾದ ಬಳಿಕ ದೇಶದ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಚೇತರಿಕೆ ದೊರೆಯಲಿದೆ. ತೆರಿಗೆ ಸಂಗ್ರಹದಲ್ಲಿ ₹ 45 ಸಾವಿರ ಕೋಟಿಗಳಷ್ಟು ಹೆಚ್ಚಳವಾಗಲಿದೆ. ದೇಶದ ಜಿಡಿಪಿಯಲ್ಲಿ ₹ 1.95 ಲಕ್ಷ ಕೋಟಿಗಳಷ್ಟು ಹೆಚ್ಚಳ ದಾಖಲಾಗುವ ನಿರೀಕ್ಷೆ ಇದೆ’ ಎಂದರು.
 
ದೇಶದಲ್ಲಿ ಜಿಎಸ್‌ಟಿ ಜಾರಿ ಏಳು ವರ್ಷಗಳಷ್ಟು ತಡವಾಗಿದೆ. ಇದು ಈ ಕಾಲಘಟ್ಟದ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಜಿಎಸ್‌ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ವ್ಯಾಪಾರಸ್ಥರು, ಉದ್ಯಮಿಗಳು ಮತ್ತು ನಾಗರಿಕರಿಗೆ ದೀರ್ಘಾವಧಿಯ ಲಾಭಗಳಿವೆ. 2017ರ ಏಪ್ರಿಲ್‌ 1ರಿಂದ ಹೊಸ ತೆರಿಗೆ ಪದ್ಧತಿ ಅನುಷ್ಠಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಯಾ ರಾಜ್ಯಗಳು ಪ್ರತ್ಯೇಕವಾದ ಜಿಎಸ್‌ಟಿ ಕಾಯ್ದೆ ರೂಪಿಸಿಕೊಂಡು ಈ ತೆರಿಗೆ ಪದ್ಧತಿಯನ್ನು ಅಳವಡಿಸಿ ಕೊಳ್ಳಬೇಕಿದೆ ಎಂದು ವಿವರಿಸಿದರು.
 
‘ಒಂದು ದೇಶ– ಒಂದು ಮಾರು ಕಟ್ಟೆ– ಒಂದು ತೆರಿಗೆ ಪದ್ಧತಿ ಎಂಬ ಹೊಸ ಪರಿಕಲ್ಪನೆಗೆ ಜಿಎಸ್‌ಟಿ ನಾಂದಿ ಹಾಡ ಲಿದೆ. ತೆರಿಗೆ ಪಾವತಿ ನೋಂದಣಿಗಳು ಮತ್ತು ಕಡತಗಳ ನಿರ್ವಹಣೆ ಸಂಪೂರ್ಣ ಸರಳೀಕರಣವಾಗಲಿದೆ. ವ್ಯಾಟ್‌, ಕೇಂದ್ರೀಯ ಮಾರಾಟ ತೆರಿಗೆ, ಮೇಲು ಸುಂಕಗಳು ಸೇರಿದಂತೆ ಹಲವು ತೆರಿಗೆಗಳನ್ನು ವಿಧಿಸುವ ಪದ್ಧತಿ ತೆರೆಗೆ ಸರಿಯಲಿದೆ. ತೆರಿಗೆ ವ್ಯವಸ್ಥೆಯಲ್ಲಿನ ಬಹುಪಾಲು ತೊಡಕುಗಳು ನಿವಾರಣೆ ಆಗಲಿವೆ’ ಎಂದರು.
 
ಎಫ್‌ಡಿಐ ಹೆಚ್ಚಳ: ಜಿಎಸ್‌ಟಿ ಜಾರಿ ಯಿಂದಾಗಿ ದೇಶಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ನೇರ ಬಂಡವಾಳ ಹರಿದು ಬರಲಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳಿಂದ ದೇಶದ ಉದ್ದಿಮೆದಾರರು ಮತ್ತು ನಾಗರಿಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಶಿವಕುಮಾರ್ ಹೇಳಿದರು.
 
ಸಮುದ್ರ ತೀರದಲ್ಲಿ ರಾಜ್ಯದ ಗಡಿ ಯನ್ನು 12 ನಾಟಿಕಲ್‌ ಮೈಲು ದೂರ ದಿಂದ 200 ನಾಟಿಕಲ್‌ ಮೈಲುಗಳವರೆಗೆ ವಿಸ್ತರಿಸಲಾಗಿದೆ. ಹಿಂದೆ ಇದ್ದ ಅಂತರವನ್ನು ಗಮನಿಸಿಕೊಂಡು ವ್ಯಾಪಾರಿಗಳು ತೆರಿಗೆ ವಂಚಿಸುತ್ತಿದ್ದರು. ಈಗ ರಾಜ್ಯಗಳ ಗಡಿಗಳನ್ನು ವಿಸ್ತರಿಸಿರು ವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಹರಿದುಬರಲಿದೆ ಎಂದರು.
 
ಜಿಎಸ್‌ಟಿ ನೋಂದಣಿಗೆ ಸರಳ ವಿಧಾನವನ್ನು ರೂಪಿಸಲಾಗಿದೆ. ಪಾನ್‌ ಸಂಖ್ಯೆ ಆಧಾರದಲ್ಲಿ ಮೂರು ಕೆಲಸದ ದಿನಗಳೊಳಗೆ ನೋಂದಣಿ ಪ್ರಕ್ರಿಯೆ ಮುಗಿಸಲಾಗುವುದು. ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಆಗಿರುವವರನ್ನು ಸ್ವಯಂ ಚಾಲಿತವಾಗಿ ಜಿಎಸ್‌ಟಿ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
 
ಕೆಸಿಸಿಐ ಅಧ್ಯಕ್ಷ ಜೀವನ್‌ ಸಲ್ಡಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ಎ.ನಾಣಿಯಪ್ಪ, ಉಪಾಧ್ಯಕ್ಷೆ ವಾಟಿಕಾ  ಪೈ, ಕಾರ್ಯದರ್ಶಿಗಳಾದ ಪಿ.ಬಿ.ಅಬ್ದುಲ್ ಹಮೀದ್, ಪ್ರವೀಣ್‌ಕುಮಾರ್ ಕಲ್ಭಾವಿ, ಖಜಾಂಚಿ ಗಣೇಶ್ ಭಟ್‌, ಸಂಸ್ಥೆಯ ರಾಜ್ಯ ತೆರಿಗೆ ಮತ್ತು ವ್ಯಾಟ್‌ ಉಪ ಸಮಿತಿ ಅಧ್ಯಕ್ಷ ನಂದಗೋಪಾಲ್ ಶೆಣೈ ಉಪಸ್ಥಿತರಿದ್ದರು.
 
**
ಅಮೆಜಾನ್‌ನಂತಹ ನೂರಾರು ಕೋಟಿ ರೂಪಾಯಿ ವಹಿವಾಟು ಮಾಡುವ ಸಂಸ್ಥೆಗಳು ಕಾಯ್ದೆಯ ನೆಪಹೇಳಿ ಇಷ್ಟು ದಿನ ತೆರಿಗೆ ಪಾವತಿಸಿಲ್ಲ. ಆದರೆ, ಜಿಎಸ್‌ಟಿ ಜಾರಿಯಾದ ಬಳಿಕ ಎಲ್ಲ ಇ–ಕಾಮರ್ಸ್‌ ಕಂಪೆನಿಗಳು ಸೇವಾ ತೆರಿಗೆ ವ್ಯಾಪ್ತಿಗೆ ಬರುತ್ತವೆ.
- ವೈ.ಸಿ.ಶಿವಕುಮಾರ್
ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.