ADVERTISEMENT

ಜೆ–ನರ್ಮ್ ಬಸ್ ಸಂಚಾರಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:03 IST
Last Updated 7 ಜುಲೈ 2017, 9:03 IST

ಉಡುಪಿ: ಜೆ–ನರ್ಮ್ ಬಸ್‌ ಸಂಚಾರಕ್ಕೆ ಖಾಸಗಿ ಬಸ್ ಮಾಲೀಕರ ಸಂಘ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದನ್ನು ವಿರೋಧಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಖಾಸಗಿ ಬಸ್‌ ಲಾಬಿಗೆ ಮಣಿದಿರುವ ಬಿಜೆಪಿ ಮುಖಂಡರು ಜನರಿಗೆ ದ್ರೋಹ ಮಾಡುತ್ತಿದ್ದಾರೆ, ಜನರಿಗೆ ತೊಂದರೆ ಆಗಿದ್ದರೂ ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು. ಬಿಜೆಪಿ ಮುಖಂಡ ಹಾಗೂ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಘುಪತಿ ಭಟ್‌, ಮಟ್ಟಾರು ರತ್ನಾಕರ ಹೆಗ್ಡೆ ಅವರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಅಮೃತ್ ಶೆಣೈ, ಉಡುಪಿ ಜಿಲ್ಲೆಯ ಜನರಿಗೆ ಉತ್ತಮ ಬಸ್ ಸೇವೆ ಸಿಗಲಿ ಎಂಬ ಕಾರಣಕ್ಕೆ ಸಚಿವ ಪ್ರಮೋದ್ ಅವರು ನರ್ಮ್ ಬಸ್‌ಗಳನ್ನು ತಂದಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ರಿಯಾಯಿತಿ ದರದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ADVERTISEMENT

ಖಾಸಗಿ ಬಸ್‌ಗಳು ಸಂಚರಿಸದ ಗ್ರಾಮೀಣ ಭಾಗಗಳಿಗೂ ನರ್ಮ್ ಬಸ್‌ಗಳು ಹೋಗುತ್ತಿವೆ. ಇಂತಹ ಜನರ ಕೆಲಸದ ವಿರುದ್ಧ ಖಾಸಗಿ ಬಸ್‌ ಮಾಲೀಕರು ಮತ್ತು ಬಿಜೆಪಿ ನಾಯಕರು ತಡೆಯಾಜ್ಞೆ ತಂದಿರುವುದು ಖಂಡನೀಯ ಎಂದರು.

ಉಡುಪಿಯ ಬಡ ಜನರಿಗೆ ಸರ್ಕಾರಿ ಬಸ್ ಸೇವೆಯ ಅವಶ್ಯಕತೆ ಇದೆ. ಅಕ್ಟೋಬರ್‌ನಲ್ಲಿ ಆರಂಭವಾದ ನರ್ಮ್ ಬಸ್‌ ಸೇವೆ ಯಶಸ್ವಿಯಾಗಿ ನಡೆಯುತ್ತಿದೆ. ಸಿಟಿ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ₹4 ಕೋಟಿ ಸಹ ಮಂಜೂರು ಮಾಡಲಾಗಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಹಾಗೂ ಖಾಸಗಿ ಬಸ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ನಗರಸಭೆ ಸದಸ್ಯ ಜನಾರ್ದನ ಭಂಡಾರ್ಕರ್ ಹೇಳಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ ರಾಜ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ. ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ವಿಘ್ನೇಶ್ ಕಿಣಿ, ಪ್ರಶಾಂತ್ ಪೂಜಾರಿ, ಮೆಲ್ವಿನ್ ಡಿಸೋಜ, ರಾಘವೇಂದ್ರ ಶೇಟ್‌, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕ ಕರ್ನೇಲಿಯೊ, ಜ್ಯೋತಿ ಹೆಬ್ಬಾರ್‌, ರಮೇಶ್ ಕಾಂಚನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.