ADVERTISEMENT

ತರಬೇತಿ - ನೇಮಕಾತಿ ಕೇಂದ್ರ ಶೀಘ್ರ: ಸಚಿವ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:02 IST
Last Updated 20 ಮೇ 2017, 5:02 IST

ಪಡುಬಿದ್ರಿ: ಬಡಾ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಸಾರ್ವಜನಿಕ ರುದ್ರಭೂಮಿ ಕಾಮಗಾರಿಗೆ ಸಂಬಂಧಪಟ್ಟು ಮೊಗವೀರ ಸಭಾ ಹಾಗೂ ದಲಿತ ಸಂಘಟನೆಗಳ ನಡುವೆ ಶುಕ್ರವಾರ ಉಚ್ಚಿಲ ಬಡಾ ಗ್ರಾಮದಲ್ಲಿ ವಾಗ್ವಾದ ನಡೆಯಿತು.

ಬಡಾ ಗ್ರಾಮದ ಎರ್ಮಾಳು ಬಡಾ ಕರ್ಕೇರ ಮೂಲಸ್ಥಾನದ ಬಳಿಯ 1.56 ಎಕರೆ ಸರ್ಕಾರಿ ಜಮೀನಿನಲ್ಲಿ 50 ಸೆಂಟ್ಸ್ ಜಾಗವನ್ನು ಸಾರ್ವಜನಿಕ ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಗೊತ್ತುಪಡಿಸಿ 2016 ಏಪ್ರಿಲ್ 4 ರಂದು ಉಡುಪಿಯ ಅಂದಿನ ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್ ಆದೇಶ ಹೊರಡಿಸಿದ್ದರು. ಆದೇಶ ಹೊರಡಿಸಿ ಟೆಂಡರ್ ಪೂರ್ಣಗೊಂಡು ಕಾಮಗಾರಿ ನಡೆಸಲು ಬಂದ ಎರಡೆರಡು ಗುತ್ತಿಗೆದಾರರಿಗೆ ಸ್ಥಳೀಯ ಮೊಗವೀರ ಸಭಾದ ವಿರೋಧ  ತಿಳಿಸಿದ್ದರು.

ಟೆಂಡರ್ ವಹಿಸಿಕೊಂಡಿದ್ದ ಈಗಿನ ಗುತ್ತಿಗೆದಾರರು  ಶುಕ್ರವಾರ ದಲಿತ ಸಂಘಟನೆಗಳ ನೆರವಿನಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಆರಂಭಿಸಲು ಮುಂದಾದರು. ಆದರೆ ಕಾ ಮೊಗವೀರ ಸಭಾ ಸದಸ್ಯರು ಕಾಮಗಾರಿ ತಡೆ ಪ್ರಯತ್ನಿಸಿದ ಪರಿಣಾಮ  ಕೆಲಕಾಲ ಉದ್ವಿಗ್ನತೆಗೆ ಕಾರಣವಾಯಿತು. ಬೆಳಗ್ಗಿನಿಂದಲೇ ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಮೊಗವೀರ ಸಭಾದ ಸದಸ್ಯರು ಗ್ರಾಮ ಪಂಚಾಯ್ತಿ ನಿರ್ಣಯದಂತೆ ಬಡಾಗ್ರಾಮದ ಕಟ್ಟಿಂಗೇರಿ ಮತ್ತು ಇಲ್ಲಿ ರುಧ್ರಭೂಮಿ ನಿರ್ಮಾಣ ಮಾಡಬೇಕು. ಹೊಸ ಆದೇಶವಿಲ್ಲದೆ ನಮಗೆ ಯಾವುದೇ ಮಾಹಿತಿ ನೀಡದೆ ಇಲ್ಲಿ ಕಾಮಗಾರಿ ನಡೆಸಬಾರದು ಎಂದು ಪಟ್ಟು ಹಿಡಿದರು. ಕಾಮಗಾರಿ ನಡೆಸದಂತೆ ತಹಶೀಲ್ದಾರ್ ಹಾಗೂ ಅಧಿಕಾರಿಗಳಲ್ಲಿ ವಿನಂತಿಸಿದರು. ಟಿಪ್ಪರ್‌ಗಳಲ್ಲಿ ಕಾಮಗಾರಿಗೆ ತಂದ ಸಾಮಾಗ್ರಿಗಳನ್ನು ಇಳಿಸದಂತೆ ತಡೆದರು.

ADVERTISEMENT

ತಹಶೀಲ್ದಾರ್ ಮಹೇಶ್ಚಂದ್ರ  ಅವರ ಮೌಖಿಕ ಆದೇಶದಿಂದ ಕೆಲಸ ಸ್ಥಗಿತಗೊಳಿಸಲಾಯಿತು. ಇದರಿಂದ ಕುಪಿತರಾದ ದಲಿತ ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಅವರಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸಭಾದ ಸದಸ್ಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಸ್ಥಳದ ವಾಸ್ತವ ಸ್ಥಿತಿಯನ್ನು ಜಿಲ್ಲಾಧಿಕಾರಿಗೆ ತಿಳಿಸುತ್ತೇನೆ’ ಎಂದರು. ಕಾಮಗಾರಿಗೆ ತಂದಿರುವ ಸಾಮಗ್ರಿಗಳನ್ನು ಶೇಖರಿಸಲು ಅನುವು ಮಾಡುವಂತೆ ಡಿವೈಎಸ್ಪಿ ಕುಮಾರಸ್ವಾಮಿಯವರಿಗೆ ಸೂಚಿಸಿದರು.

ಸುಂದರ್ ಮಾಸ್ತರ್ ಮಾಹಿತಿ ನೀಡಿ, ‘ಬ್ರಿಟಿಷರ ಕಾಲದಲ್ಲಿಯೇ ಸಾರ್ವಜನಿಕ ರುಧ್ರಭೂಮಿ ಎಂದು ಮಂಜೂರಾಗಿರುವ ಜಾಗವನ್ನು ಸಾರ್ವಜನಿಕ ಹಿತಾಸಕ್ತಿಗಾಗಿಯೇ ಉಪಯೋಗಿಸಿಕೊಳ್ಳಬೇಕು. ವಿರೋಧ ವ್ಯಕ್ತವಾಗುತ್ತಿರುವುದು ಸರಿಯಲ್ಲ. ದಲಿತರ ಹೆಣ ಸುಡಲು ಬಿಡುವುದಿಲ್ಲ, ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡುತ್ತೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಜಿಲ್ಲಾಧಿಕಾರಿಯವರ ಆದೇಶ ವಿರುದ್ಧ ವಿರೋಧ ವ್ಯಕ್ತಪಡಿಸಬಾರದು’ ಎಂದು ಹೇಳಿದರು.

**

ಸಭೆ ಬಹಿಷ್ಕಾರ: ನಿರ್ಧಾರ
‘ಸ್ಮಶಾನ ವಿವಾದದ ಬಗ್ಗೆ ಕಾಪು ಶಾಸಕರಿಗೆ 2 ವರ್ಷದ ಮುನ್ನವೇ ಮನವಿ ನೀಡಲಾಗಿದೆ. ಅವರಿಗೆಸಾಮಾಜಿಕ ನ್ಯಾಯ ಬದ್ಧತೆ ಇದರೆ ಸ್ಮಶಾನಕ್ಕೆ ಚಾಲನೆ ನೀಡಬೇಕು. ಇಂಥ ಸೂಕ್ಷ್ಮ ವಿಚಾರಗಳಲ್ಲೂ ರಾಜಕೀಯ ಮಾಡಿದರೆ ದಲಿತರ ಕುಂದು ಕೊರತೆ ಸಭೆಯನ್ನು ಬಹಿಷ್ಕಾರ ಮಾಡಬೇಕಾಗಬಹುದು’ ಎಂದು ಸುಂದರ್ ಮಾಸ್ತರ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.