ADVERTISEMENT

ನೆಲ ಬಾಂಬ್ ಸ್ಫೋಟ ಪ್ರಕರಣ: ಮೂವರು ಆರೋಪಿಗಳು ಖುಲಾಸೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:03 IST
Last Updated 3 ಜುಲೈ 2017, 9:03 IST

ಉಡುಪಿ: ಹೆಬ್ರಿಯ ಮತ್ತಾವು ತಿರುವಿ ನಲ್ಲಿ ನೆಲಬಾಂಬ್ ಸ್ಫೋಟಿಸಿ ಪೊಲೀಸ ರನ್ನು ಕೊಲ್ಲಲು ಯತ್ನಿಸಿದ್ದ ಪ್ರಕರಣದ ಮೂರು ಮಂದಿ ಆರೋಪಿಗಳನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ದೇವೇಂದ್ರ, ನಂದಕುಮಾರ್ ಮತ್ತು ನೀಲಗುಳಿ ಪದ್ಮನಾಭ ಖುಲಾಸೆಗೊಂಡ ವರು. 2015ರ ಜುಲೈ28ರಂದು ಪೊಲೀಸರ ತಂಡ ನಕ್ಸಲ್‌ ವಿರುದ್ಧ ಕಾರ್ಯಾಚರಣೆಗಾಗಿ ಮುಟ್ಲುಪಾಡಿ ಕಡೆಗೆ ಹೋಗುತ್ತಿದ್ದಾಗ ಮತ್ತಾವು ತಿರುವಿನ ಸಮೀಪ ನೆಲಬಾಂಬ್‌ ಸ್ಫೋಟಿಸಿತ್ತು. ಎರಡು ಜೀಪ್‌ಗಳು ಜಖಂಗೊಂಡು 13 ಪೊಲೀಸರು ಗಾಯಗೊಂಡಿದ್ದರು.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಶನಿವಾರ ಆದೇಶ ಪ್ರಕಟಿಸಿದರು. ಆರೋಪಿಗಳ ಪರವಾಗಿ ಉಡುಪಿಯ ಎಂ. ಶಾಂತಾರಾಮ್ ಶೆಟ್ಟಿ ವಾದ ಮಂಡಿಸಿದ್ದರು.
‘ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಂದ್ರ ಮತ್ತು ನಂದಕುಮಾರ್ ಅವರು 2009 ರಿಂದಲೂ ನ್ಯಾಯಾಂಗ ಬಂಧನದಲ್ಲಿದ್ದರು. ಮೈಸೂರಿನ ಜೈಲಿನಲ್ಲಿರುವ ಅವರು ಬಿಡುಗಡೆಯಾಗಿದ್ದಾರೆ. ನೀಲ ಗುಳಿ ಪದ್ಮನಾಭ ಅವರೂ ಮೈಸೂರಿನ ಜೈಲಿನಲ್ಲಿ ಇದ್ದಾರೆ. ಅವರ ಮೇಲೆ ಇನ್ನೂ ಕೆಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ’ ಎಂದು ಶಾಂತಾರಾಮ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.