ADVERTISEMENT

ನ್ಯಾಯಾಲಯದಲ್ಲಿ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 10:27 IST
Last Updated 20 ನವೆಂಬರ್ 2017, 10:27 IST

ಉಡುಪಿ: ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಸಿದ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸರ್ಕಾರದ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿತು.

ಸಮಿತಿ ಸದಸ್ಯ ಜಿ. ರಾಜಶೇಖರ್ ಮಾತನಾಡಿ, ‘ಹಾಜಿ ಅಬ್ದುಲ್ಲಾ ಅವರು ಬಡವರಿಗೆ ಅನುಕೂಲವಾಗಲಿ ಎಂದು ಆಸ್ಪತ್ರೆಗಾಗಿ ಜಾಗವನ್ನು ದಾನವಾಗಿ ನೀಡಿದರು. ಆದರೆ, ಸರ್ಕಾರ ಅದೇ ಜಾಗವನ್ನು ಖಾಸಗಿವರಿಗೆ ನೀಡಿದೆ. ತನ್ನದಲ್ಲದ ಆಸ್ತಿಯನ್ನು ಪರಭಾರೆ ಮಾಡಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಜೆಗಳು ಹಕ್ಕಿನ ರೀತಿ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಆದರೆ, ಅದೇ ಹಕ್ಕನ್ನು ಖಾಸಗಿ ವ್ಯಕ್ತಿಯ ಕೃಪೆ ರೀತಿ ಪಡೆದುಕೊಳ್ಳುವ ಸ್ಥಿತಿಯನ್ನು ನಿರ್ಮಿಸಲಾಗಿದೆ. ಹಕ್ಕು, ಕರುಣೆ, ಔದಾರ್ಯದ ವ್ಯತ್ಯಾಸವೇ ಇವರಿಗೆ ಗೊತ್ತಿಲ್ಲದಂತಾಗಿದೆ ಎಂದರು.

ADVERTISEMENT

ಡಾ. ಪಿ.ವಿ. ಭಂಡಾರಿ ಮಾತನಾಡಿ,‘ ಆಹ್ವಾನ ಪತ್ರಿಕೆಯಲ್ಲಿ ‘ಸರ್ಕಾರಿ’ ಎಂಬ ಪದವೇ ಬಿಟ್ಟು ಹೋಗಿದೆ. ಇನ್ನೂ ಕಾಮಗಾರಿಯೇ ಪೂರ್ಣಗೊಳ್ಳದ ಆಸ್ಪತ್ರೆಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಮುಂದಿನ ಬಾರಿ ತಮ್ಮ ಸರ್ಕಾರ ಬರುವುದಿಲ್ಲ ಎಂದು ಅವರಿಗೆ ಖಚಿತವಾಗಿದೆ. ಅಲ್ಲದೆ, ಬಿ.ಆರ್. ಶೆಟ್ಟಿ ಅವರಿಂದ ಹಣ ಪಡೆದುಕೊಂಡಿರುವ ಸರ್ಕಾರ ಉಪಕಾರ ಸ್ಮರಣೆ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಾವು ಬಡವರ ಪರ ಎಂದು ಭಾಷಣ ಮಾಡುತ್ತಾರೆ. ಖಾಸಗಿ ಆಸ್ಪತ್ರೆ ನಿಯಂತ್ರಿಸಲು ಕಾಯ್ದೆ ಎನ್ನುತ್ತಾರೆ. ಆದರೆ, ಉಡುಪಿಯಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಬಡವರ ಶಾಪ ಇವರಿಗೆ ತಟ್ಟಲಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಸೋತು ಮಾಜಿಗಳಾಗುವರು’ ಎಂದು ವಾಗ್ದಾಳಿ ನಡೆಸಿದರು. ವಿಲಿಯಂ ಮಾರ್ಟಿಸ್, ಇದ್ರಿಸ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ಕೆ. ಫಣಿರಾಜ್, ಮೀನಾಕ್ಷಿ ಭಂಡಾರಿ ಇದ್ದರು.

* * 

ಇಂದಿರಾಗಾಂಧಿ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರೆ ಅವರ ಪಕ್ಷದವರು ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿ ಅವರ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಿರುವುದು ವಿಪರ್ಯಾಸ
ಬಾಲಕೃಷ್ಣ ಶೆಟ್ಟಿ
ಹೋರಾಟ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.