ADVERTISEMENT

ಪಂಡಿತ ಪರಂಪರೆಗೆ ಸಂದ ಗೌರವ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 8:26 IST
Last Updated 18 ಜುಲೈ 2017, 8:26 IST

ಉಡುಪಿ: ‘ಜ್ಞಾನ ಮತ್ತು ಪ್ರತಿಭೆ ಸಮಾನಾಗಿ ತುಂಬಿರುವವರು ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಅವರು ವ್ಯಾಸರಾಜ ಮಠಕ್ಕೆ ಪೀಠಾಧಿಪತಿ ಆಗಿರುವುದು ಸಂತೋಷ ತಂದಿದೆ’ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಇದೇ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸೋಸಲೆ ವ್ಯಾಸರಾಜ ಮಠಾಧೀಶರಾದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಅವರನ್ನು ರಾಜಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.

‘ಇದು ಕೇವಲ ಮಧ್ವ ಸಮಾಜಕ್ಕೆ ಮಾತ್ರ ಹೆಮ್ಮೆಯ ವಿಷಯವಲ್ಲ, ಇಡೀ ಪಂಡಿತ ಪರಂಪರೆಗೆ ಸಂದ ಗೌರವ. ಅವರು ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ದಕ್ಷವಾಗಿ ಕೆಲಸ ಮಾಡಿದ ಅವರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತದೆ. ಮೊದಲು ಅವರು ನನಗೆ ಶಿಷ್ಯರಾಗಿದ್ದರು, ಆದರೆ ಈಗ ಅವರೂ ಪೀಠಾಧಿಪತಿ ಆಗಿರುವುದರಿಂದ ಇಬ್ಬರೂ ಸಹೋದರರಂತೆ. ಅವರು ನನ್ನ ಐದನೇ ಪರ್ಯಾಯದ ಅವಧಿಯಲ್ಲಿಯೇ ಮಠಾಧೀಶರಾದದ್ದು ಸಂತಸದ ಸಂಗತಿ’  ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ‘ನಾನು ಪೇಜಾವರ ಶ್ರೀಗಳಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುತ್ತೇನೆ. ಅವರ ಹಾದಿಯಲ್ಲಿಯೇ ನಡೆಯುತ್ತೇನೆ. ವ್ಯಾಸರಾಜರು ಕೇವಲ ಶಾಸ್ತ್ರ ಸಂರಕ್ಷಣೆ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸ ಸಹ ಮಾಡಿದ್ದರು. ವಿದ್ವಾಂಸರಿಗೆ ಆಶ್ರಯ ನೀಡಿದ್ದರು, ಕೆರೆ–ಕಟ್ಟೆಗಳನ್ನು ನಿರ್ಮಿಸಿದ್ದರು’ ಎಂದರು.

ADVERTISEMENT

ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ‘ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಅವರು ಎತ್ತರದ ಪದವಿ ಕುಲಪತಿ ಸ್ಥಾನದಲ್ಲಿದ್ದರು. ಅದಕ್ಕೂ ಎತ್ತರದ ಸ್ಥಾನ ಬಾಕಿ ಇದ್ದದ್ದು ಪೀಠದ ಸ್ಥಾನ, ಈಗ ಅದನ್ನೂ ಪಡೆದುಕೊಂಡಿದ್ದಾರೆ. ಬದುಕಿನಲ್ಲಿ ಇದಕ್ಕಿಂತ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ. ಭಗವಂತ ಅವರಿಗೆ ಎಲ್ಲ ನೀಡಿದ್ದಾರೆ. ಇರುವ ವಿದ್ಯೆ ಸಮಾಜಕ್ಕೆ ನೀಡಲು ಭಗವಂತ ಆರೋಗ್ಯ ಭಾಗ್ಯ ಕರುಣಿಸಲಿ’ ಎಂದು ಹಾರೈಸಿದರು. ಸ್ವಾಮೀಜಿ ಅವರನ್ನು ಸಂಸ್ಕೃತ ವಿದ್ಯಾಲಯದಿಂದ ಮಠದ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.