ADVERTISEMENT

ಪುಕ್ಕಟೆ ಕೂಪನ್‌ಗೆ ₹10 ವಸೂಲಿ!

ಪಡಿತರ ಕೂಪನ್‌ ವ್ಯವಸ್ಥೆ– ಫ್ರಾಂಚೈಸಿ ವಿರುದ್ಧ ಆರೋಪ

ಎಂ.ನವೀನ್ ಕುಮಾರ್
Published 11 ಜನವರಿ 2017, 10:38 IST
Last Updated 11 ಜನವರಿ 2017, 10:38 IST
ಪುಕ್ಕಟೆ ಕೂಪನ್‌ಗೆ ₹10 ವಸೂಲಿ!
ಪುಕ್ಕಟೆ ಕೂಪನ್‌ಗೆ ₹10 ವಸೂಲಿ!   

ಉಡುಪಿ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರು ಆಹಾರ ಧಾನ್ಯ ಪಡೆಯಲು ಕೂಪನ್‌ ವ್ಯವಸ್ಥೆ ಯನ್ನು  ಜಾರಿಗೆ ತಂದಿದೆ, ಕೂಪನ್‌ ಗಳನ್ನು ಶುಲ್ಕ ಪಡೆಯದೆ ಉಚಿತವಾಗಿ ನೀಡಬೇಕು ಎಂದು ಇಲಾಖೆ ನಿರ್ದೇಶನ ನೀಡಿದ್ದರೂ ಉಡುಪಿ ನಗರದ ಕೆಲವೆಡೆ ಕೂಪನ್‌ ನೀಡಲು ₹10 ಶುಲ್ಕ ಪಡೆಯಲಾಗುತ್ತಿದೆ.

ಅಕ್ರಮ ಕಾರ್ಡ್‌ಗಳಿಗೆ ಕಡಿವಾಣ ಹಾಕಲು ಹಾಗೂ ಫಲಾನುಭವಿಗಳ ದಿನಸಿಯನ್ನು ಬೇರೊಬ್ಬರು ಪಡೆದು ಕೊಳ್ಳುವುದನ್ನು ತಡೆಯುವ ಉದ್ದೇಶ ದಿಂದ ಐದು ತಿಂಗಳ ಹಿಂದೆ ಈ ಕೂಪನ್ ವ್ಯವಸ್ಥೆಯನ್ನು ಇಲಾಖೆ ಜಾರಿ ಗೊಳಿಸಿತ್ತು. ಕಾರ್ಡ್‌ದಾರರು ಇಲಾಖೆ ಗುರುತಿಸಿದ ಫ್ರಾಂಚೈಸಿ ಹೊಂದಿರುವ ಇಂಟರ್‌ನೆಟ್‌ ಕೇಂದ್ರಗಳಿಂದ ಕಾರ್ಡ್‌ ಹಾಗೂ ಜೈವಿಕ (ಹೆಬ್ಬೆಟ್ಟು) ಗುರುತು ನೀಡಿ ಕೂಪನ್ ಪಡೆದುಕೊಳ್ಳಲು ಅವಕಾಶ ಇದೆ. ಪ್ರತಿ ಕೂಪನ್‌ಗೆ ಫ್ರಾಂಚೈಸಿ ಮಾಲೀಕರಿಗೆ ₹3 ಅನ್ನು ಇಲಾಖೆ ನೀಡುತ್ತಿದೆ. ಆದರೂ ಕೆಲವೆಡೆ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ.

ಉಡುಪಿ ನಗರದ ಮಿಷನ್ ಆಸ್ಪತ್ರೆ ರಸ್ತೆಯಲ್ಲಿರುವ ಕಾಮತ್‌ ಎಂಟರ್‌ ಪ್ರೈಸಸ್‌ನಲ್ಲಿ ಸೋಮವಾರ ಕೆಲವು ಕಾರ್ಡ್‌ದಾರರಿಂದ ₹10 ವಸೂಲಿ ಮಾಡಿರುವ ಬಗ್ಗೆ ದೂರು ಕೇಳಿ ಬಂದಿದೆ. ಉಚಿತವಾಗಿ ನೀಡಬೇಕಲ್ಲವೇ ಎಂದು ಕೆಲವರು ಪ್ರಶ್ನಿಸಿದಕ್ಕೆ, ‘ಇಲ್ಲ ₹10 ನೀಡಲೇಬೇಕು’ ಎಂದು ಅವರು ಪಡೆದು ಕೊಂಡಿದ್ದಾರೆ. ಬಿಪಿಎಲ್‌ ಕಾರ್ಡ್‌ ಇರುವವರಿಗೆ ಉಚಿತವಾಗಿ ಅಕ್ಕಿ ನೀಡ ಲಾಗುತ್ತಿದೆ. ಆದರೆ, ಕೂಪನ್‌ಗಾಗಿಯೇ ಬಡವರು ₹10 ಖರ್ಚು ಮಾಡಬೇಕಿದೆ. ಅಲ್ಲದೆ, ಫ್ರಾಂಚೈಸಿ ಹಾಗೂ ನ್ಯಾಯಬೆಲೆ ಅಂಗಡಿ ಎರಡೆರಡು ಕಡೆ ಅಲೆದಾಡಬೇಕಾಗಿದೆ.

ಹೊಸದಾಗಿ ಕೂಪನ್ ವ್ಯವಸ್ಥೆ ಜಾರಿ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು. ನೇರವಾಗಿ ಕಾರ್ಡ್‌ ತೋರಿಸಿ ರೇಷನ್ ಪಡೆಯುವ ಬದಲು ಎರಡೆರಡು ಕೆಲಸ ಮಾಡಬೇಕು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಡ್‌ದಾರರು ನೋಂದಣಿ ಮಾಡಿದ ಮೊಬೈಲ್‌ ಸಂಖ್ಯೆಯಿಂದ ಎಸ್‌ಎಂಎಸ್‌ ಕಳುಹಿಸಿ ಸಹ ಕೂಪನ್‌ ಸಂಖ್ಯೆ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪೇಪರ್‌ ಕೂಪನ್‌ಗಳನ್ನೇ ತನ್ನಿ ಎಂದು ಒತ್ತಡ ಹೇರುತ್ತಿದ್ದಾರೆ.

‘ಫ್ರಾಂಚೈಸಿಗಳಿಗೆ ಪ್ರತಿ ಕೂಪನ್‌ಗೆ ₹3 ಅನ್ನು ಇಲಾಖೆಯೇ ಪಾವತಿಸುತ್ತದೆ, ಆದ್ದರಿಂದ ಕಾರ್ಡ್‌ದಾರರಿಂದ ಹಣ ವಸೂಲಿ ಮಾಡುವಂತಿಲ್ಲ. ಹಾಗೇನಾದರೂ ಮಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಫ್ರಾಂಚೈಸಿ ರದ್ದು ಮಾಡಲಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಎಸ್‌. ಯೋಗೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.