ADVERTISEMENT

‘ಬಿಜೆಪಿ ಗಲಭೆ ಮಾಡಿಸಬಹುದು’

ಪ್ರಶ್ನೆ ಕೇಳಿದರೆ ಹಿಂದೂ ವಿರೋಧಿ ಪಟ್ಟ: ನಟ ಪ್ರಕಾಶ್ ರೈ ಆತಂಕ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 13:09 IST
Last Updated 25 ಏಪ್ರಿಲ್ 2018, 13:09 IST

ಉಡುಪಿ: ‘ಬಿಜೆಪಿ ಮುಖಂಡರಿಗೆ ಶಾಂತಿಯುತವಾಗಿ ಚುನಾವಣೆ ನಡೆಸಿ ಅಭ್ಯಾಸ ಇಲ್ಲ, ಆದ್ದರಿಂದ ಮೇ 12ರ ಮೊದಲು ಗಲಭೆ ಎಬ್ಬಿಸಿ ಜನರ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ನಟ ಪ್ರಕಾಶ್ ರೈ ಹೇಳಿದರು.

ಇಲ್ಲಿ ಮಂಗಳವಾರ ನಡೆದ ‘ಜಸ್ಟ್ ಆಸ್ಕಿಂಗ್’ ಅಭಿಯಾನದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೂ ಯಡಿಯೂರಪ್ಪ ಅವರು ಮೂರು ತಿಂಗಳೂ ಮುಖ್ಯಮಂತ್ರಿ ಆಗಿರುವುದಿಲ್ಲ. ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಏಕೆಂದರೆ ಮತ ಗಳಿಸುವ ಉದ್ದೇಶದಿಂದ ಮಾತ್ರ ಅವರನ್ನು ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿಯ ಇಂತಹ ಆಟವನ್ನು ಈ ಹಿಂದೆ ಕರ್ನಾಟಕದ ಜನರು ನೋಡಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ತಮ್ಮ ಆಸೆ ತೀರಿಸಿಕೊಳ್ಳಲು ಮೂರು ಮಂದಿ ಮುಖ್ಯಮಂತ್ರಿ ಆಗಿದ್ದರು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಬಿಜೆಪಿ ಮಾರಣಾಂತಿಕ, ಆದ್ದರಿಂದ ಅದನ್ನು ಮೊದಲು ನಿಲ್ಲಿಸಬೇಕು. ಕೆರೆತ, ಕೆಮ್ಮು ಮುಂತಾದ ಸಮಸ್ಯೆ ನಿಧಾನವಾಗಿ ಗುಣಪಡಿಸಿಕೊಳ್ಳಬಹುದು. ಜನರೊಂದಿಗೆ ಸಂವಾದ ಮಾಡಿದಾಗ ‘ಗಲಭೆ, ಗದ್ದಲ’ ಸಾಕು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಶಾಂತಿ ಬೇಕು ಎಂದು ಎಲ್ಲರಿಗೂ ಅನಿಸಿತೊಡಗಿದೆ. ಆದ್ದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ದಕ್ಷಿಣ ಕನ್ನಡದ ಜನರಿಗಂತೂ ಈ ರೀತಿ ರಾಜಕೀಯ ಬೇಡವಾಗಿದೆ’ ಎಂದರು.

‘ಮಹಾಭಾರತ ಕಾಲದಲ್ಲಿಯೇ ಇಂಟರ್‌ನೆಟ್ ಇತ್ತು ಎಂದು ತ್ರಿಪುರ ಮುಖ್ಯಮಂತ್ರಿ ಹೇಳುತ್ತಾರೆ. ಇಂತಹ ಹತ್ತಾರು ಅಸಂಗತ ಹೇಳಿಕೆಗಳನ್ನು ಬಿಜೆಪಿ ಮುಖಂಡರು ನೀಡಿದ ನಂತರ ‘ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ. ಹೇಳಿಕೆ ನೀಡುತ್ತಿರುವವರನ್ನು ದಯವಿಟ್ಟು ತಡೆಯಬೇಡಿ, ತಾವು ಆರಿಸಿರುವ ನಾಯಕರು ಎಂತಹ ವ್ಯಕ್ತಿಗಳು ಎಂದು ನಮ್ಮ ಜನರಿಗೆ ಆ ಮೂಲಕವಾದರೂ ಗೊತ್ತಾಗಲಿ. ಸಂವಿಧಾನ ಬದಲಾಯಿಸುತ್ತೇವೆ ಎಂದು ಅನಂತಕುಮಾರ್ ಹೆಗಡೆ ಹೇಳಿಕೆ ನೀಡದಿದ್ದರೆ ಅವರ ಕಾರ್ಯಸೂಚಿಯೇ ಗೊತ್ತಾಗುತ್ತಿರಲಿಲ್ಲ’ ಎಂದರು.

**
ಬಿ.ಎಸ್. ಯಡಿಯೂರಪ್ಪ ಅವರಿಗಿಂತ ಉತ್ತಮ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸಿದ್ದಾರೆ
ಪ್ರಕಾಶ್ ರೈ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.