ADVERTISEMENT

ಬೆಂಗಳೂರು -ಕಾರವಾರ ರೈಲು: ಬದಲಿ ಮಾರ್ಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 9:04 IST
Last Updated 1 ಸೆಪ್ಟೆಂಬರ್ 2017, 9:04 IST

ಬೈಂದೂರು: ಹಾಸನ, ಮೈಸೂರು ಮಾರ್ಗವಾಗಿ ಸಂಚರಿಸುತ್ತಿರುವ ಬೆಂಗಳೂರು-ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಈಗಾಗಲೇ ಚಾಲನೆಗೊಂಡ ಹಾಸನ-ಶ್ರವಣಬೆಳಗೊಳ-ಯಶವಂತಪುರ ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕೆಂದು ಬೈಂದೂರಿನ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ರೈಲ್ವೆ ಗ್ರಾಹಕರ ಸಮಾಲೋಚನಾ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ದಕ್ಷಿಣ ಪಶ್ಚಿಮ ರೈಲ್ವೇಯ ಹುಬ್ಬಳ್ಳಿ ವಲಯದ ಮಹಾ ಪ್ರಬಂಧಕರಲ್ಲಿ ಮನವಿ ಮಾಡಿದ್ದಾರೆ.

ಕರಾವಳಿ ಕರ್ನಾಟಕವನ್ನು ರಾಜ್ಯ ರಾಜಧಾನಿಯೊಂದಿಗೆ ಬೆಸೆಯುವ ಈ ಏಕೈಕ ಪ್ರಮುಖ ರೈಲು ಈಗ 750 ಕಿಲೋ ಮೀಟರು ದೀರ್ಘ ಸುತ್ತು ಬಳಸಿನ ಮಾರ್ಗದಲ್ಲಿ ಸಾಗುತ್ತದೆ. ಇದರ ಪ್ರಯಾಣಕ್ಕೆ 18 ಗಂಟೆಗಳು ತಗಲುತ್ತವೆ. ಪರಿಣಾಮ ಬೆಂಗಳೂರು- ಕಾರವಾರ ನಡುವಿನ ನೇರ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ.

ಹಲವರು 10 ಗಂಟೆಯಲ್ಲಿ ಈ ದೂರವನ್ನು ಕ್ರಮಿಸುವ ಬಸ್‌ ಆಶ್ರಯಿಸುತ್ತಿದ್ದಾರೆ. ರೈಲ್ವೆಗೆ ಇದರಿಂದ ಆದಾಯ ನಷ್ಟ ಆಗುವುದರ ಜತೆಗೆ ರೈಲ್ವೆ ಸೇವೆಯ ಕುರಿತು ತಾತ್ಸಾರ ಮೂಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೆಂಗಳೂರಿಗೆ ಶೀಘ್ರವೇ ತಲಪುವ ನೇರ ರಾತ್ರಿ ರೈಲುಗಳಿದ್ದರೆ, ಕರಾವಳಿಗೆ ಈ ಸೌಲಭ್ಯವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಬೆಂಗಳೂರು–ಕಾರವಾರ ನೇರ ರೈಲು ಸಂಚಾರದ ಪ್ರಸ್ತಾವನೆ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ವಲಯ ರೈಲ್ವೆ ಗ್ರಾಹಕರ ಸಮಾಲೋಚನಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಆಗ ಅದನ್ನು ಮೈಸೂರು ಪ್ರತಿನಿಧಿ ವಿರೋಧಿಸಿದ್ದರಿಂದ ನಿರ್ಧಾರ ಕೈಗೊಳ್ಳಲಿಲ್ಲ.

ಈ ರೈಲನ್ನು ಮೈಸೂರಿನಿಂದ ಆರಂಭಿಸಿ ಬೆಂಗಳೂರು-ಯಶವಂತಪುರ– ಶ್ರವಣಬೆಳಗೊಳ- ಹಾಸನ ಮೂಲಕ ಓಡಿಸಿದರೆ ಅಂತಹ ವಿರೋಧಕ್ಕೆ ಆಸ್ಪದವಿರದು. ಅದಕ್ಕೆ ಹೊಂದಿಕೆಯಾಗುವಂತೆ ಮೈಸೂರು- ಧಾರವಾಡ ಎಕ್ಸ್‌ಪ್ರೆಸ್ ರೈಲಿನ ವೇಳೆಯನ್ನು ಬದಲಾಯಿಸುವ ಮೂಲಕ ಮೈಸೂರು- ಹಾಸನ ನಡುವಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬಹುದು.

ಇದರೊಂದಿಗೆ ಬೆಂಗಳೂರು-ಕಾರವಾರ ರೈಲಿನ ಮಂಗಳೂರು– ಕಣ್ಣೂರು ಬೋಗಿಗಳನ್ನು ಮಂಗಳೂರು ಜಂಕ್ಷನ್‌ನಲ್ಲಿ ಜೋಡಿಸುವಂತೆ ಮಾಡಿದರೆ ಅಲ್ಲಿಯೂ 45 ನಿಮಿಷ ಉಳಿತಾಯವಾಗಿ ಒಟ್ಟು ಪ್ರಯಾಣದ ಅವಧಿ 4 ಗಂಟೆ 45 ನಿಮಿಷ ಕಡಿಮೆಯಾಗುತ್ತದೆ ಎಂಬ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.