ADVERTISEMENT

ಭ್ರಷ್ಟಾಚಾರದ ಹಿಂದಿರುವುದು ದುರಾಸೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:46 IST
Last Updated 16 ನವೆಂಬರ್ 2017, 10:46 IST

ಬೈಂದೂರು: ನಮ್ಮ ಸಂವಿಧಾನ ಸೃಷ್ಟಿಸಿದ ಶಾಸನಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಉದ್ದೇಶಿತ ಗುರಿ ಸಾಧನೆಯಲ್ಲಿ ವಿಫಲವಾಗಿವೆ. ಭ್ರಷ್ಟಾಚಾರ ಎಲ್ಲ ರಂಗಗಳಲ್ಲೂ ಎಲ್ಲೆ ಮೀರಿ ಬೆಳೆದಿದೆ. ಅದರ ಹಿಂದಿರುವುದು ದುರಾಸೆ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿದ್ದರೆ ಭ್ರಷ್ಟಾಚಾರ ನಿಲ್ಲದು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.

ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉಡುಪಿ ಜಿಲ್ಲಾ ಪಂಚಾಯಿತಿ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್, ಕುಂದಾಪುರ ತಾಲ್ಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ಮಂಗಳವಾರ ವಿನೂತನವಾಗಿ ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಸನ ಸಭೆಗಳ ಪ್ರತಿನಿಧಿಗಳು ಕರ್ತವ್ಯ ನಿರ್ವಹಿಸುತ್ತಿಲ್ಲ. ಅವರ ಮತ್ತು ಕಾರ್ಯಾಂಗದ ಅಧಿಕಾರಿಗಳ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ. ಅವುಗಳನ್ನು ನಿಯಂತ್ರಿಸಲಿಕ್ಕಿರುವ ಸಂಸ್ಥೆಗಳನ್ನು ಒಂದೇ ಮುಚ್ಚಲಾಗುತ್ತಿದೆ, ಇಲ್ಲವೇ ದುರ್ಬಲಗೊಳಿಸಲಾಗುತ್ತಿದೆ. ನ್ಯಾಯದಾನದಲ್ಲಾಗುತ್ತಿರುವ ವಿಳಂಬಕ್ಕೆ ಪರಿಹಾರವೇ ಇಲ್ಲವೆಂಬಂತಾಗಿದೆ.

ADVERTISEMENT

ಯುವಜನರು ಎರಡು ಮುಖ್ಯ ಮೌಲ್ಯಗಳಾದ ತೃಪ್ತಿ ಮತ್ತು ಮಾನವೀಯತೆ ಬೆಳೆಸಿಕೊಂಡರೆ ಇದನ್ನು ಹಿಡಿತಕ್ಕೆ ತರಬಹುದು. ಸಮಾಜದಲ್ಲಿ ಭ್ರಷ್ಟರನ್ನು ಬಹಿಷ್ಕರಿಸುವ ಮನೋಧರ್ಮ ಮೂಡಬೇಕು ಎಂದು ಅವರು ಹೇಳಿದರು.

ಸಾಧಕ ವಿದ್ಯಾರ್ಥಿ ಮಂಜೇಶ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಪುಟಾಣಿಗಳು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರೋಹನ್ ರಾವ್, ಶಿವದರ್ಶನ್, ರಾಹುಲ್, ತೃಪ್ತಿ ಬಿ. ಎಸ್, ಅದ್ವೈತ್ ಆಚಾರ್ಯ, ಅಮೂಲ್ಯ ಕೆ. ಜಿ ಅವರನ್ನು ಪುರಸ್ಕರಿಸಲಾಯಿತು. ಶಿಕ್ಷಕರಿಂದ ವಿದ್ಯಾರ್ಥಿ ದತ್ತು ಸ್ವೀಕಾರ, ಶಾಲಾ ಪತ್ರಿಕೆ ಹೆಸರು ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮಾದರಿ ಶಾಲೆಯ ಪದವೀಧರ ಮುಖ್ಯೋಪಾಧ್ಯಾಯ ಜನಾರ್ದನ ದೇವಾಡಿಗ ಸ್ವಾಗತಿಸಿದರು. ಸಂವೇದನಾ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾಮಿನಿ ವಂದಿಸಿದರು. ಗಣಪತಿ ಹೋಬಳಿದಾರ್ ನಿರೂಪಿಸಿದರು.

ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ರಾಜು ಪೂಜಾರಿ, ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ, ದಾನಿ ಜಯಾನಂದ ಹೋಬಳಿದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಒ.ಆರ್, ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕರುಣಾಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ವಿದ್ಯಾರ್ಥಿ ನಾಯಕ ನಾಗರಾಜ್, ಶಾಲಾಭಿವೃದ್ಧಿ ಸಮಿತಿಗಳ ಸಮನ್ವಯ ಸಮಿತಿಯ ಹುಸೇನ್ ಹೈಕಾಡಿ, ಸಂಪನ್ಮೂಲ ವ್ಯಕ್ತಿ ಬಾಬು ಪೈ, ಸುಬ್ರಹ್ಮಣ್ಯ ಬಿಜೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.