ADVERTISEMENT

ಮಕ್ಕಳಲ್ಲಿ ಸಾಂಸ್ಕೃತಿಕ ಬಡತನ

ಯುವ ಕವಿಗೋಷ್ಠಿ ಉದ್ಘಾಟಿಸಿ ಹಿರಿಯ ಕವಿ ಎಚ್‌. ಡುಂಡಿರಾಜ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2015, 6:15 IST
Last Updated 24 ಆಗಸ್ಟ್ 2015, 6:15 IST
ಉಡುಪಿ ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಮಕ್ಕಳ ನಾಟಕ ಸಾಹಿತ್ಯ ಗೋಷ್ಠಿ ಮತ್ತು ಮಕ್ಕಳ ಹಾಗೂ ಯುವ ಕವಿಗೋಷ್ಠಿಯನ್ನು ಹಿರಿಯ ಕವಿ ಎಚ್‌. ಡುಂಡಿರಾಜ್‌ ಉದ್ಘಾಟಿಸಿದರು.  ಪ್ರಜಾವಾಣಿ ಚಿತ್ರ
ಉಡುಪಿ ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಮಕ್ಕಳ ನಾಟಕ ಸಾಹಿತ್ಯ ಗೋಷ್ಠಿ ಮತ್ತು ಮಕ್ಕಳ ಹಾಗೂ ಯುವ ಕವಿಗೋಷ್ಠಿಯನ್ನು ಹಿರಿಯ ಕವಿ ಎಚ್‌. ಡುಂಡಿರಾಜ್‌ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ನವ್ಯ ಕಾಲದಲ್ಲಿ ಮಕ್ಕಳ ಸಾಹಿತಿ, ಹಾಸ್ಯ ಸಾಹಿತಿ ಎನಿಸಿಕೊಂಡರೆ ಅಂತಸ್ತಿಗೆ ಚ್ಯುತಿ ಬರುತ್ತದೆಂಬ ಅನು ಮಾನ ಕೆಲವರಲ್ಲಿದೆ. ಮಕ್ಕಳ ಸಾಹಿತ್ಯ ಪಟ್ಟ ಬಂದಲ್ಲಿ ಅಗ್ರ ಸಾಹಿತ್ಯ ಪಂಕ್ತಿಯಲ್ಲಿ ಸ್ಥಾನ ಸಿಗುವುದಿಲ್ಲವೆಂಬ ಭಯ ಇಂದಿ ಗೂ ಅನೇಕರಲ್ಲಿದೆ’ ಎಂದು ಹಿರಿಯ ಕವಿ ಎಚ್‌. ಡುಂಡಿರಾಜ್‌ ಹೇಳಿದರು.

ರಂಗಭೂಮಿ ಉಡುಪಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಗರದ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಮಕ್ಕಳ ನಾಟಕ ಸಾಹಿತ್ಯ ಗೋಷ್ಠಿ ಮತ್ತು ಮಕ್ಕಳ ಹಾಗೂ ಯುವ ಕವಿಗೋಷ್ಠಿ ಯನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳು ಆರ್ಥಿಕವಾಗಿ ಶ್ರೀಮಂತರಾಗಿದ್ದರೂ, ಸಾಂಸ್ಕೃತಿಕವಾಗಿ ಬಡವರಾಗಿದ್ದಾರೆ. ಹಾಗಾಗಿ ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಮಕ್ಕಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಹ ಪೂರಕ ವಾತಾವರಣ ಸಮಾಜದಲ್ಲಿ ಇಲ್ಲ. ಸಾಂಸ್ಕೃತಿಕ ಪರಿಧಿ ನುಚ್ಚುನೂರಾಗಿದೆ. ಅದರಿಂದ ಮಕ್ಕಳನ್ನು ರಕ್ಷಿಸುವ ಕೆಲಸವಾಗಬೇಕು. ಇಂದು ಮಕ್ಕಳ ನಾಟಕವೆಂಬ ವರ್ಗವಿಲ್ಲ. ಹಾಗಾಗಿ ಇಲ್ಲದಿರುವುದನ್ನು ತೋರಿಸುವ ಪಕ್ವತೆ, ಸೃಜನಶೀಲತೆ ಮಕ್ಕಳಲ್ಲಿ ಮೂಡಲಿ ಎಂದು ಅಭಿಪ್ರಾಯಪಟ್ಟರು.

‘ಪ್ರತಿಯೊಂದು ಮಗುವಿನಲ್ಲಿಯೂ ಅವ್ಯಕ್ತವಾದ ಪ್ರತಿಭೆ ಇರುತ್ತದೆ. ಅದಕ್ಕೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು. ಕಲೆ ಎಂಬುದು ರಕ್ತಗತ ವಾಗಿ ಬರುವುದಿಲ್ಲ. ಅದು ಸಾಧನೆಯ ಮೂಲಕ ಸಿದ್ಧಿಯಾಗುತ್ತದೆ’ ಎಂದು ಎಂಜಿಎಂ ಕಾಲೇಜಿನ ಉಪನ್ಯಾಸಕ ಡಾ. ಪುತ್ತಿ ವಸಂತ ಕುಮಾರ್‌ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಉಪಸ್ಥಿತ ರಿದ್ದರು. ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸುವರ್ಣ ರಂಗಭೂಮಿ ಸಮಿತಿಯ ಕಾರ್ಯಾಧ್ಯಕ್ಷ ಯು. ಉಪೇಂದ್ರ ಸ್ವಾಗತಿ ಸಿದರು, ಪೂರ್ಣಿಮಾ ಜನಾರ್ದನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.