ADVERTISEMENT

ಮಲ್ಟಿಮೀಡಿಯಾ ಆಕ್ರಮಣ: ಪ್ರೊ. ಕಂಬಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:28 IST
Last Updated 16 ಸೆಪ್ಟೆಂಬರ್ 2017, 9:28 IST
ಮಣಿಪಾಲ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ಮಾತನಾಡಿದರು. ಪ್ರಜಾವಾಣಿ ಚಿತ್ರ
ಮಣಿಪಾಲ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ಭಕ್ತಿ ಪಂಥ ಚಳವಳಿ ಮತ್ತು ಎಲ್ಲರೂ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿದ ಸಾರ್ವಜನಿಕ ಶಿಕ್ಷಣ ಪದ್ಧತಿ; ಇವುಗಳು ನಮ್ಮಲ್ಲಿ ಆದ ಎರಡು ಕ್ರಾಂತಿಗಳು’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ಬಣ್ಣಿಸಿದರು.

ಮಣಿಪಾಲ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜನ ಸಾಮಾನ್ಯರು ಯಾರ ನೆರವೂ ಇಲ್ಲದೆ ದೇವರ ಜೊತೆಗೆ ಮಾತನಾಡುವ ಅವಕಾಶ ಭಕ್ತಿ ಚಳವಳಿಯಿಂದ ಸಿಕ್ಕಿತು. ಅವರು ದೇಸಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದು  ವ್ಯಾಪಕವಾಗಿ ಬೆಳೆಯಿತು, ಅದರ ಬಗ್ಗೆ ಬಯಲಾಟ ಜನಪದ ಸಾಹಿತ್ಯ ಹುಟ್ಟಿತು ಮತ್ತು ಅದು ಚೈತನ್ಯ ಉಂಟು ಮಾಡಿತು’ ಎಂದರು.

‘ಬ್ರಿಟಿಷಕರು ಶಿಕ್ಷಣವನ್ನು ಕಡ್ಡಾಯ ಮಾಡಿದರು. ಅಲ್ಲಿಯ ವರೆಗೆ ಊರಿನಲ್ಲಿ ಒಬ್ಬನೇ ಕಲಿತವನಿರುತ್ತಿದ್ದ. ಆತನೇ ಎಲ್ಲವನ್ನೂ ಓದಿ ಹೇಳತ್ತಿದ್ದ. ಎಲ್ಲರ ಎದೆಗೆ ಅಕ್ಷರ ಬಿದ್ದ ಮೇಲೆ ದೊಡ್ಡ ಕ್ರಾಂತಿ ಆಯಿತು. ಅಷ್ಟೇ ಅಪಾಯಕಾರಿ ವಿಚಾರಗಳೂ ಬಂದವು’ ಎಂದರು.

ADVERTISEMENT

‘ಭಾರತೀಯರಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂದು ನಿರ್ಧರಿಸಲು ಮೆಕಾಲೆ ಸಮಿತಿ ರಚಿಸಿದ್ದ. ಅದರಲ್ಲಿ ರಾಜಾರಾಮ್ ಮೋಹನ್ ರಾಯ್ ಇದ್ದರು. ಮೆಕಾಲೆ ಇಂಡಿಯನ್ ರೀತಿ ಶಿಕ್ಷಣ ನೀಡಬೇಕು ಎಂದು ಹೇಳಿದ.

ಆದರೆ ರಾಯ್ ಅವರು ಇಂಗ್ಲಿಷ್‌ ತಿಳಿವಳಿಕೆ ನೀಡಿ ಎಂದು ಹೇಳಿದರು. ಆದ್ದರಿಂದ ಇಂಗ್ಲಿಷ್ ಅಧಿಕೃತ ಭಾಷೆಯಾಯಿತು. ಪರಿಣಾಮ ವಿದ್ಯೆಯ ಭಾಷೆಯಾಗಿದ್ದ ಸಂಸ್ಕೃತ ಮಹತ್ವ ಕಳೆದುಕೊಂಡಿತು. ಪದ್ಯವೇ ಪ್ರಮುಖವಾಗಿದ್ದ ಸಂದರ್ಭದಲ್ಲಿ ಗದ್ಯ ಪ್ರಾಮುಖ್ಯ ಪಡೆದುಕೊಂಡಿತು’ ಎಂದು ಹೇಳಿದರು.

‘ಮಾನವನ ಆಂತರಿಕ ಅಗತ್ಯತೆಯ ಪರಿಣಾಮ ಎಲ್ಲ ಬಗೆಯ ಕಲಾ ಪ್ರಕಾರಗಳೂ ಹುಟ್ಟಿಕೊಂಡವು. ಸಾಹಿತ್ಯ ಎಂಬುದು ಜ್ಞಾನದ ಬಗೆಯಾಗಿತ್ತು ಹಾಗೂ ಜನರು ಅದರ ಮೇಲೆಯೇ ಅವಲಂಬಿತರಾಗಿದ್ದರು. ಎಲ್ಲ ಕಲೆಗಳೂ ಮಾನವನ ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸುವ ಸಾಧನಗಳಾಗಿದ್ದವು.

ಆದರೆ ಈಗ ಆ ಸ್ಥಾನವನ್ನು ಮಲ್ಟಿಮೀಡಿಯಾಗಳು ಆಕ್ರಮಿಸಿಕೊಂಡಿವೆ. ಮೇಲ್ವರ್ಗ ಮತ್ತು ಕೆಳವರ್ಗದವರು ಇದರ ಮೇಲೆಯೇ ಅವಲಂಬಿತರಾಗಿದ್ದಾರೆ’ ಎಂದು ಕಂಬಾರ ಹೇಳಿದರು.

‘ತಂತ್ರಜ್ಞಾನದ ಅಬ್ಬರದ ಈ ಕಾಲ ಘಟ್ಟದಲ್ಲಿ ಹಾಗೂ ಟಿ.ವಿಯ ಯುಗದಲ್ಲಿ ಕಾವ್ಯದ ಭವಿಷ್ಯದ ಬಗ್ಗೆ ಯೋಚಿಸುವುದು ತುಂಬ ಕಷ್ಟ ಎನಿಸುತ್ತದೆ. ಇದೇ ರೀತಿಯ ವಾತಾವರಣ ಮುಂದುವರೆಯುವುದೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಕಾವ್ಯಕ್ಕೆ ಮಾತ್ರ ಈಗ ನಿರ್ಮಾಣವಾಗಿರುವ ನಿರ್ವಾತವನ್ನು ತುಂಬುವ ಶಕ್ತಿ ಇದೆ’ ಎಂದು ಅವರು ಅಭಿಪ್ರಾಯಪಟ್ಟರು. ಲೇಖಕಿ ವೈದೇಹಿ, ಮಣಿಪಾಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ವಿನೋದ್ ಭಟ್, ಯೂರೋಪಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.