ADVERTISEMENT

ಮಾಣಿಬೆಟ್ಟು: ನೂತನ ಶಿಲಾಯುಗದ ಅವಶೇಷಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 9:38 IST
Last Updated 28 ನವೆಂಬರ್ 2017, 9:38 IST
ಶಿರ್ವ ಸಮೀಪದ ಮಾಣಿಬೆಟ್ಟಿನಲ್ಲಿ ಪತ್ತೆಯಾದ ಕಲ್ಲಿನ ಕೊಡಲಿ
ಶಿರ್ವ ಸಮೀಪದ ಮಾಣಿಬೆಟ್ಟಿನಲ್ಲಿ ಪತ್ತೆಯಾದ ಕಲ್ಲಿನ ಕೊಡಲಿ   

ಶಿರ್ವ: ಉಡುಪಿ ತಾಲ್ಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು ಪರಿಸರದಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿರುವ ಅವಶೇಷಗಳು ಶನಿವಾರ ಪತ್ತೆಯಾಗಿದ್ದು, ಮಾಣಿಬೆಟ್ಟು ಪರಿಸರದಲ್ಲಿ ಐತಿಹಾಸಿಕ ಅಧ್ಯಯನವನ್ನು ತೀವ್ರಗೊಳಿಸಿದ್ದಲ್ಲಿ ಮತ್ತಷ್ಟು ಅವಶೇಷಗಳು ದೊರಕುವ ಸಾಧ್ಯತೆಗಳಿವೆ ಎಂದು ಸಂಶೋಧನಾ ವಿದ್ಯಾರ್ಥಿ ಶುತೇಶ್‌ ಆಚಾರ್ಯ ತಿಳಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ವಿದ್ಯಾರ್ಥಿ ಶುತೇಶ್ ಆಚಾರ್ಯ ಅವರು ಉಡುಪಿ ತಾಲ್ಲೂಕಿನ ಶಿರ್ವ ಗ್ರಾಮದಲ್ಲಿ ಕ್ಷೇತ್ರಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ ಮಾಣಿಬೆಟ್ಟುವಿನಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿವೆ.

ಈಗಾಗಲೇ ನೂತನ ಶಿಲಾಯುಗದಲ್ಲಿ ಬಳಸಲಾಗುತ್ತಿದ್ದ ಹೊಳಪುಳ್ಳ ಕೈಗೊಡಲಿ ಹಾಗೂ ಬೂದು ಮತ್ತು ಕೆಂಪು ಬಣ್ಣದ ಮಡಿಕೆ ಚೂರುಗಳು ಲಭ್ಯವಾಗಿವೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಈಗಾಗಲೇ ನೂತನ ಶಿಲಾಯುಗದ ಅವಶೇಷಗಳು ಲಭ್ಯವಾಗಿದ್ದು, ವಿದ್ವಾಂಸರು ಅವುಗಳ ಕಾಲಮಾನವನ್ನು ಕ್ರಿಸ್ತ ಪೂರ್ವ 3000 ಎಂದು ಗುರುತಿಸಿದ್ದಾರೆ. ಹಾಗಾಗಿ ಮಾಣಿಬೆಟ್ಟು ಗ್ರಾಮದ ಇತಿಹಾಸವು ಸಂಶೋಧನೆಯಲ್ಲಿ ದೊರಕಿರುವ ಅವಶೇಷದ ಆಧಾರದ ಮೇಲೆ ಮೂರು ಸಹಸ್ರಮಾನದಷ್ಟು ಹಿಂದಕ್ಕೆ ಸಾಗುತ್ತದೆ. ದೊರೆತ ಅವಶೇಷಗಳ ಕುರಿತು ಇನ್ನು ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದು ಎಂದು ಶುತೇಶ್ ತಿಳಿಸಿದ್ದಾರೆ.

ADVERTISEMENT

ಮಾಣಿಬೆಟ್ಟು ಪರಿಸರದಲ್ಲಿ ಕ್ಷೇತ್ರಕಾರ್ಯವನ್ನು ಕೈಗೊಳ್ಳಲು ಬಾಬು ಆಚಾರ್ಯ ಅವರು ಸಹಕಾರಿಸಿದ್ದರು. ಆಗಿನವರು ಬಳಸುತ್ತಿದ್ದ ಸುಮಾರು 8 ಸೆಂಟಿ ಮೀಟರ್ ಉದ್ದ ಮತ್ತು 7 ಸೆಂಟಿ ಮೀಟರ್ ಅಗಲದ ಒಂದು ಕಲ್ಲಿನ ಕೈಕೊಡಲಿ ಮಾಣಿಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ದೊರೆತಿದ್ದು, ಈ ಭಾಗದಲ್ಲಿ ಈಗಾಗಲೇ ಕೆಲವರಿಗೆ ಈ ಕಲ್ಲು ದೊರೆತಿದ್ದರೂ ಅದರ ಬಗ್ಗೆ ಅರಿವಿಲ್ಲದೆ ಅದನ್ನು ಬೇರೆಡೆ ಬಿಸಾಕಿರುವುದನ್ನು ಹಿರಿಯರು ನೆನಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.