ADVERTISEMENT

ಲೋ ವೋಲ್ಟೇಜ್ ಸಮಸ್ಯೆ: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:04 IST
Last Updated 24 ಫೆಬ್ರುವರಿ 2018, 6:04 IST

ಕೋಟ (ಬ್ರಹ್ಮಾವರ): ಕೋಟ ಮೆಸ್ಕಾಂ ವ್ಯಾಪ್ತಿಯ ಜನ ಸಂಪರ್ಕ ಸಭೆಯು ಕೋಟ ಮೆಸ್ಕಾಂ ಕಚೇರಿಯಲ್ಲಿ ಉಡುಪಿ ಮೆಸ್ಕಾಂನ ಅಧೀಕ್ಷಕ ಶರತ್‌ಶ್ಚಂದ್ರ ಪಾಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಪ್ರತಾಪ್ ಶೆಟ್ಟಿ ಮಾತನಾಡಿ, ಸಾಸ್ತಾನ ಪರಿಸರದಲ್ಲಿ ತಲೆದೂರಿದ ಲೋ ವೋಲ್ಟೇಜ್ ಹಾಗೂ ಜೋತಾಡುವ ಕೇಬಲ್, ಪದೇಪದೇ ವಿದ್ಯುತ್ ವ್ಯತ್ಯಯ ಮತ್ತು ಸಾಸ್ತಾನದಲ್ಲಿ ವಿದ್ಯುತ್ ಬಿಲ್ ಸಂಗ್ರಹ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

‘ಪ್ರತಿ ಬಾರಿ ಜನಸಂಪರ್ಕ ಸಭೆ ನಡೆಸಿ ನಿರ್ಣಯಗಳನ್ನು ಪುಸ್ತಕದಲ್ಲಿ ಮಾತ್ರ ಬರೆಯುತ್ತೀರಿ. ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಕಳೆದ ಬಾರಿ ಹಲವು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದು ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ ಎಂಬಂತೆ ಆಗಿದೆ. ಹೀಗಾದರೆ ಇಂಥ ಸಭೆಗಳನ್ನು ಯಾಕೆ ಆಯೋಜಿಸುತ್ತೀರಿ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಅಧಿಕಾರಿ ಶರತ್‌ ಶ್ಚಂದ್ರಪಾಲ್, ಸಾಸ್ತಾನ ಪಾಂಡೇಶ್ವರ ಭಾಗದಲ್ಲಿ ಟಿಸಿಗಳ ಕೊರತೆ ಇದ್ದು ಕೆಲವೊಂದು ಭಾಗದಲ್ಲಿ ಒಂದು ಟಿಸಿ ಅಡಿಯಲ್ಲಿ ಹಲವು ಮನೆಗಳು ಇದ್ದು, ಅಲ್ಲಿ ವಿದ್ಯುತ್ ಅನಾಹುತಗಳಾದರೆ ಕರೆಂಟ್ ತೆಗೆಯುವುದು ಅನಿವಾರ್ಯ ವಾಗುತ್ತದೆ. ಆಗ ವಿದ್ಯುತ್ ವ್ಯತ್ಯಯ ವಾಗುವುದು ಸಹಜ. ಅಲ್ಲದೆ ಆ ಭಾಗದ ಬೇರೆಬೇರೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುತ್ತೇವೆ ಎಂದು ತಿಳಿಸಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ಕೋಟ ಮೆಸ್ಕಾಂನ ಗುರುಪ್ರಸಾದ್, ಸಾಸ್ತಾನ ಶಾಖೆಯ ಶರಣ್ಯಯ್ಯ ಹೀರೆ ಮಠ, ಶಿರಿಯಾರ ಶಾಖೆಯ ವೈಭವ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.