ADVERTISEMENT

ವೇಶ್ಯೆಯರಿಗೆ ಬೇಕು ಪರಿಣಾಮಕಾರಿ ಪುನರ್ವಸತಿ

ಲೇಖಕಿ ರೂಪಾ ಹಾಸನ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2015, 5:39 IST
Last Updated 16 ಜನವರಿ 2015, 5:39 IST

ಉಡುಪಿ:  ‘ವೇಶ್ಯಾವಾಟಿಕೆಯಿಂದ ಹೊರಬಂದು ಹೊಸ ಜೀವನ ಆರಂಭಿಸಲು ಬಯಸುವವರಿಗೆ ಪುನರ್ವಸತಿ ಕಲ್ಪಿಸುವ ಸಮರ್ಪಕವಾದ ಯೋಜನೆಗಳಿಲ್ಲ’ ಎಂದು ಲೇಖಕಿ ರೂಫಾ ಹಾಸನ ಹೇಳಿದರು.

ಉಡುಪಿಯ ರಥಬೀದಿ ಗೆಳೆಯರು ಸಂಘಟನೆ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶೇಷ ಅನುಭವಕಥನದ ಚಿಂತನಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರೇತರ ಸಂಸ್ಥೆಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ನೋಂದಣಿ ಕಾರ್ಯವನ್ನು ರಾಜ್ಯದಾದ್ಯಂತ ಆರಂಭಿಸಿವೆ. ಸುಮಾರು 80 ಸಾವಿರ ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿ ದ್ದಾರೆ. ವೇಶ್ಯಾವಾಟಿಕೆಯಿಂದ ಹೊರಬರುವವರಿಗೆ ತರಬೇತಿ ನೀಡಿ ₨20 ಸಾವಿರ ಸಾಲ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ಇದರಿಂದ ಬದುಕು ರೂಪಿಸಿಕೊಳ್ಳಲು ಆಗುವುದಿಲ್ಲ. ಸರ್ಕಾರ ಪರಿಣಾ ಮಕಾರಿಯಾದ ಪುನರ್ವಸತಿ ಯೋಜನೆ ಜಾರಿಗೆ ತಂದಿದ್ದೇ ಆದರೆ, ವೇಶ್ಯಾವಾಟಿಕೆಯ ಕೂಪದಿಂದ ಹೊರಬಂದು ಹೊಸ ಬದುಕು ಆರಂಭಿಸಲು ಸಾವಿರಾರು ಮಹಿಳೆಯರು ತಯಾರಿದ್ದಾರೆ ಎಂದರು.

‘ನಮ್ಮನ್ನು ಮನುಷ್ಯರಂತೆಯೇ ನೋಡಿ. ಬದುಕಲು ಅವಕಾಶ ಮಾಡಿಕೊಡಿ’ ಎಂದು ವಿನಮ್ರವಾಗಿ ಮನವಿ ಮಾಡಿದವರು ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದು ಸಹೃದಯರ, ಸಂಘ ಸಂಸ್ಥೆಗಳ ಸಹಾಯದಿಂದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪ್ರೇಮಾ ಚೌಹಾಣ್‌.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಮಾಗಿ ಮೂಲದ ಪ್ರೇಮಾ ಅವರು ‘ಕೊಳೆಗೇರಿಯಲ್ಲಿ ನನ್ನ ಕನಸು’ ವಿಷಯದ ಕುರಿತು ಮಾತನಾಡಿರು.

‘ಕುಟುಂಬ ಉದ್ಯೋಗ ಅರಸಿ ಉಡುಪಿಗೆ ಬಂದು ನೆಲೆ ಕಂಡುಕೊಂಡಿತು. ಬಡವೆ, ಜೋಪಡಿ ವಾಸಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವಳು ಎಂಬ ಕಾರಣಕ್ಕೆ ಸಮಾಜ ತನ್ನನ್ನು ನಿಕೃಷ್ಟವಾಗಿ ನಡೆಸಿಕೊಂಡಿತು’ ಎಂದು ಅನುಭವಿಸಿದ ಕಷ್ಟಗಳನ್ನು ಬಿಡಿಸಿಟ್ಟರು.

ಅವಕಾಶ ವಂಚಿತ ಬಡ ಮಕ್ಕಳಿಗೆ ಸಹಾಯ ಮಾಡಿ ಎಂದು ಕೊನೆಯಲ್ಲಿ ಪ್ರೇಮಾ ಮಾಡಿದ ಮನವಿಯಲ್ಲಿ ತಾನು ಅನುಭವಿಸಿದ ಯಾತನೆ ಬೇರೆ ಯಾರೂ ಅನುಭವಿಸಬಾರದು ಎಂಬ ಕಾಳಜಿಯೂ ಇತ್ತು.

ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಲೀಧರ ಉಪಾಧ್ಯ ಹಿರಿಯಡಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.