ADVERTISEMENT

ಶಕ್ತಿ ಪ್ರದರ್ಶನದ ಚಿಂತೆ ನನಗೆ ಇಲ್ಲ

ಬೆಂಬಲಿಗರ ಜತೆಗೆ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 12:01 IST
Last Updated 21 ಏಪ್ರಿಲ್ 2018, 12:01 IST

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಹಾಗೂ ಕಂದಾಯ ಉಪವಿಭಾಗಾಧಿಕಾರಿ ಭೂಬಾಲನ್‌ ಅವರಿಗೆ ನಾಮಪತ್ರ ಹಾಗೂ ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆ ಪತ್ರ ಹಸ್ತಾಂತರಿಸಿದರು. ಈ ವೇಳೆ ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್‌ ಬಿಲ್ಲವ ಕೋಣಿ, ಸದಾನಂದ ಬಳ್ಕೂರು ಹಾಗೂ ಮಂಜು ಬಿಲ್ಲವ ಕೋಟೇಶ್ವರ ಇದ್ದರು.

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿಯೂ ಹಾಲಾಡಿ ಅವರು ರ‍್ಯಾಲಿ, ಪ್ರಚಾರ ಸಭೆ, ಬೆಂಗಲಿಗರ ಶಕ್ತಿ ಪ್ರದರ್ಶನ ಮಾಡದೆ ನಾಮಪತ್ರ ಸಲ್ಲಿಸಿದ್ದರು. ಈ ಬಾರಿಯೂ ತಮ್ಮ ಪರಂಪರೆ ಮುಂದುವರೆಸಿದ್ದಾರೆ. ತಮ್ಮ ಆಪ್ತ ವಕೀಲ ಟಿ.ಬಿ.ಶೆಟ್ಟಿ ಹಾಗೂ ಬೆರಳೆಣಿಕೆ ಪಕ್ಷದ ಮುಖಂಡರು ಜತೆಗೆ ಪೂರ್ವ ಸೂಚನೆ ಇಲ್ಲದೆ ಚುನಾವಣಾಧಿಕಾರಿ ಕಚೇರಿಗೆ ಬಂದಿದ್ದ ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ADVERTISEMENT

ನಾಮಪತ್ರ ಸಲ್ಲಿಕೆಯ ಬಳಿಕ ಚುನಾವಣಾಧಿಕಾರಿ ಕಚೇರಿಯ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇವತ್ತು ಮಧ್ಯಾಹ್ನ 12 ರಿಂದ 1 ಗಂಟೆಯ ಒಳಗೆ ನಾಮಪತ್ರ ಸಲ್ಲಿಕೆಗೆ ಸಮಯ ಒಳ್ಳೆಯದಿದೆ ಎನ್ನುವ ಆಪ್ತರ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಚುನಾವಣಾ ಪ್ರಚಾರಕ್ಕಾಗಿ ಯಾವುದೇ ಅಬ್ಬರದ ಪ್ರಚಾರ ಸಭೆಗಳನ್ನು ಮಾಡುವ ಅಥವಾ ಶಕ್ತಿ ಪ್ರದರ್ಶನ ಮಾಡುವ ಯೋಚನೆ ಇಲ್ಲ. ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರ ಮತ್ತು ಮತದಾರರ ಭೇಟಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದು, ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರನಾಗಿ ನಿಂತಿರುವ ಬಗ್ಗೆ ಅಥವಾ ಈ ಬಾರಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಿಲ್ಲುತ್ತಿರುವ ಕುರಿತು ಯಾವುದೆ ಅಪಸ್ಪರ ಇಲ್ಲ. ಕ್ಷೇತ್ರದ ಗ್ರಾಮ ಗ್ರಾಮಗಳಲ್ಲಿಯೂ ನಡೆದಿರುವ ಅಭಿವೃದ್ಧಿ ಬಗ್ಗೆ ಜನರಲ್ಲಿ ಮೆಚ್ಚುಗೆ ಇದೆ. ಎಲ್ಲಿಯೂ ಕೂಡ ಜನರಿಂದ ಅಭಿವೃದ್ಧಿಯಾಗದೆ ಇರುವ ಕುರಿ ಮಾತು ಕೇಳಿ ಬಂದಿಲ್ಲ ಎಂದರು.

ಈ ಬಾರಿ ಚುನಾವಣೆ ಹೇಗೆ ಎದುರಿಸುತ್ತಿರಿ? ಎಂಬುದಕ್ಕೆ ಉತ್ತರ ನೀಡಿದ ಹಾಲಾಡಿ ಅವರು, ನಾನು ನಡೆದು ಬಂದಿರುವ ದಾರಿಯಲ್ಲಿ ನನಗೆ ವಿಶ್ವಾಸವಿದೆ. ಕಳೆದ ಶಾಸಕತ್ವದ ಅವಧಿಯಲ್ಲಿ ಸರ್ಕಾರದ ಅನ್ನಭಾಗ್ಯ, ಭಾಗ್ಯಲಕ್ಷ್ಮೀ ಮುಂತಾದ ಜನಪರ ಯೋಜನೆಗಳಿಗೆ ಬಂದಿರುವ ಅನುದಾನ ಹಾಗೂ ವರಾಹಿ ಯೋಜನೆ ಅಭಿವೃದ್ಧಿಗೆ ಬಂದಿರುವ ₹ 500 ಕೋಟಿ ಅನುದಾನ ಹೊರತು ಪಡಿಸಿ ₹ 493 ಕೋಟಿ ಅನುದಾನವನ್ನು ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ವಿನಿಯೋಗ ಮಾಡಲಾಗಿದೆ. ಸರ್ಕಾರದ ಯೋಜನೆಗಳ ಬಳಕೆಗೆ ಪರಿಣಾಮಕಾರಿಯಾಗಿ ಬಳಸಲಾಗಿದೆ. ಈ ಕಾರ್ಯಗಳ ಆಧಾರದಲ್ಲಿ, ಹಿಂದೆ ರಾಜ್ಯದ ಜನರಿಗೆ ಜನಪರ ಆಡಳಿತ ನೀಡಿದ್ದ ಯಡಿಯೂರಪ್ಪ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರಕ್ಕೆ ನೀಡಿದ ಕೊಡುಗೆ ಆಧಾರದಲ್ಲಿ ಜನರಲ್ಲಿ ಮತಯಾಚನೆ ಮಾಡಲಿರುವವೆ ಎಂದರು.

ಪ್ರತಿಯೊಂದು ಮನೆಯಲ್ಲಿಯೂ ಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಸರಿಪಡಿಸುವ ಹೊಣೆ ಮನೆ ಹಿರಿಯರದ್ದು, ಪಕ್ಷದಲ್ಲಿ ಇರುವ ಆಂತರಿಕ ಭಿನ್ನಾಭಿಪ್ರಾಯ ಬಗೆಹರಿಸಲು ಪಕ್ಷದ ಜಿಲ್ಲಾ ಹಾಗೂ ರಾಜ್ಯದ ಪ್ರಮುಖರು ಪ್ರಯತ್ನಿಸುತ್ತಾರೆ. ಶಾಲೆಯಲ್ಲಿ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಉಂಟಾದಲ್ಲಿ ಅದನ್ನು ಬಗೆಹರಿಸುವವರು ಶಿಕ್ಷಕರು ಎಂದು ಮಾರ್ವಿಕವಾಗಿ ಹೇಳಿದ ಅವರು ರಾಜಕೀಯದಲ್ಲಿ ಪರ ವಿರೋಧಗಳು ಸ್ವಾಭಾವಿಕ ಪ್ರಕ್ರಿಯೆಗಳು ಎಂದರು.

‘ರೈತರ ನಿರ್ಲಕ್ಷ್ಯದ ವಿಷಯವೇ ಬರಲ್ಲ’

ವರಾಹಿ ನೀರಾವರಿ ಯೋಜನೆ ಮಾತ್ರವಲ್ಲ, ಈ ರಾಜ್ಯದ ಹೆಚ್ಚಿನ ನೀರಾವರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿರುವ ಉದಾಹರಣೆ ಇಲ್ಲ. ಇಷ್ಟಕ್ಕೂ ವರಾಹಿ ಯೋಜನೆ ಪ್ರಾರಂಭವಾಗಿದ್ದು, ನನ್ನ ಅವಧಿಯಲ್ಲಿ ಅಲ್ಲ. ಈ ಯೋಜನೆ ಪ್ರಾರಂಭಗೊಂಡ ನಂತದ ದಿನಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷದವರು ಶಾಸಕರು ಹಾಗೂ ಸಚಿವರಾಗಿದ್ದಾರೆ. ವರಾಹಿ ಯೋಜನೆಯೇ ಇನ್ನೂ ಮುಗಿಯದೆ ಇರುವುದರಿಂದಾಗಿ ಈ ಭಾಗದ ರೈತರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಬರೋದಿಲ್ಲ. ಕ್ಷೇತ್ರದಲ್ಲಿನ ಕಾಮಗಾರಿಗಳ ಕಳಪೆ ಬಗ್ಗೆ ಶಾಸಕನಾಗಿ ಜವಾಬ್ದಾರಿಯುತನಾಗಿ ಕಾರ್ಯನಿರ್ವಹಿಸಿದ್ದೇನೆ ಇದು ಕೇವಲ ಬಾಯಿ ಮಾತಿನ ಹೇಳಿಕೆಯಲ್ಲ, ನಾನು ವಿಧಾನಸಭೆಯಲ್ಲಿ ಮಾತನಾಡಿದ ಬಗ್ಗೆ ಹಾಗೂ ಸರ್ಕಾರದೊಂದಿಗೆ ಪತ್ರ ವಿನಿಮಯ ನಡೆಸಿರುವ ಕುರಿತು ದಾಖಲೆ ಇರುವುದಾಗಿ ತಿಳಿಸಿದ ಅವರು ವರಾಹಿ ಯೋಜನೆಗಾಗಿ ನನ್ನ ಜಾಗ ಹೋಗಿಲ್ಲ, ಹೊಲಗಾಲುವೆಯಲ್ಲಿ ನನ್ನ ಸಹೋದರರ ಜಾಗ ಹೋಗಿದೆ ಎಂದು ಸ್ವಷ್ಟಪಡಿಸಿದರು.

**

ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ. ಒಟ್ಟಾಗಿ ಸೇರಿಕೊಂಡು ಚುನಾವಣೆ ಎದುರಿಸುತ್ತೇವೆ – ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರದ ಬಿಜೆಪಿ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.