ADVERTISEMENT

ಶಾಲಾ ವಾಹನ: ಸುರಕ್ಷತೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:04 IST
Last Updated 17 ಮೇ 2017, 6:04 IST

ಉಡುಪಿ: ಶಾಲಾ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಸರ್ಕಾರ ರೂಪಿಸಿರುವ ಎಲ್ಲ ನಿಯಮಗಳನ್ನು ವಾಹನ ಮಾಲೀಕರು, ಚಾಲಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಶಾಲಾ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ವಾಹನಗಳು ಕಡ್ಡಾಯವಾಗಿ ವಿಮೆ ಮತ್ತು ಸಾಮರ್ಥ್ಯ (ಫಿಟ್‌ನೆಸ್) ಪ್ರಮಾಣ ಪತ್ರ ಹೊಂದಿರಬೇಕು. ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ತುರ್ತು ನಿರ್ಗಮನ ದ್ವಾರ ಇರಬೇಕು. ವಾಹನಗಳಿಗೆ ಹಳದಿ ಬಣ್ಣ ಮತ್ತು ನಾಲ್ಕು ಕಡೆಗಳಲ್ಲಿ ಶಾಲಾ ವಾಹನ ಎಂದು ಸ್ಪಷ್ಟವಾಗಿ ನಮೂದಿಸಿರಬೇಕು.

ಚಾಲಕರ ಬಳಿ ಚಾಲನಾ ಪರವಾನಗ ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅವರ ಹಿನ್ನೆಲೆಯನ್ನು ಪರಿಶೀಲಿಸಿದ ನಂತರವೇ ನೇಮಕ ಮಾಡಿಕೊಳ್ಳಿ. ಸುರಕ್ಷಿತ ಚಾಲನೆಯ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದ ಅವರು, ಚಾಲಕರಿಗೆ ಸುರಕ್ಷಿತ ಚಾಲನೆ ಬಗ್ಗೆ ಪುನರ್ಮನನ ತರಬೇತಿ ನೀಡಿ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದರು.

ADVERTISEMENT

ವಾಹನಗಳ ಚಾಲಕರು ಪರಸ್ಪರ ಪೈಪೋಟಿಗೆ ಬೀಳದೆ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಮತ್ತು ಮನೆಗೆ ತಲುಪಿಸಬೇಕು. ಶಾಲಾ ವಾಹನದಲ್ಲಿ ಪ್ರಯಾಣಿಸುವ ಎಲ್ಲ ಮಕ್ಕಳ ವಿಳಾಸ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಅವರ ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಮಳೆಗಾಲದಲ್ಲಿ ಶಾಲಾ ವಾಹನ ಕೆಲವೊಮ್ಮೆ ನಿಗದಿತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭದಲ್ಲಿ ಚಾಲಕರ ಮೇಲೆ ಒತ್ತಡ ಹೇರಬಾರದು.

ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಿ ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ. ಮಕ್ಕಳ ಸುರಕ್ಷತೆ ಬಗ್ಗೆ ಕೈಗೊಂಡಿರುವ ಮತ್ತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಎಂದರು.

ಶಾಲೆ ಇರುವ ಕಡೆ ಮತ್ತು ಶಾಲಾ ಮಕ್ಕಳ ಸಂಚರಿಸುವ ಪ್ರದೇಶದಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಹೆದ್ದಾರಿಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರು ವಿರುದ್ದ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಗಸ್ತು ಪೊಲೀಸರಿಗೆ ತಾಕೀತು ಮಾಡಿದರು.

ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳ ರಕ್ಷಣೆ, ಪೊಕ್ಸೋ ಕಾಯ್ದೆ ಅನುಷ್ಠಾನದ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಗ್ರೇಡಿಂಗ್ ನೀಡಲಾಗುವುದು ಎಂದರು. ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ, ಡಿಡಿಪಿಐ ದಿವಾಕರ ಶೆಟ್ಟಿ ಇದ್ದರು.\

**

ಶಾಲಾ ವಾಹನಗಳಿಗೆ  ವೇಗ ನಿಯಂತ್ರಕ ಕಡ್ಡಾಯ.  ವಾಹನ ಸುಸ್ಥಿತಿಯಲ್ಲಿರಬೇಕು ಮತ್ತು ನಿಗದಿತ ಸಂಖ್ಯೆಯ ಮಕ್ಕಳನ್ನು ಮಾತ್ರ ಕರೆದೊಯ್ಯಬೇಕು.
-ಪ್ರಿಯಾಂಕ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.