ADVERTISEMENT

‘ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಕ್ಕೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:49 IST
Last Updated 31 ಜನವರಿ 2017, 6:49 IST
‘ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಕ್ಕೆ ಆದ್ಯತೆ’
‘ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಕ್ಕೆ ಆದ್ಯತೆ’   

ಬ್ರಹ್ಮಾವರ: ಮುಂಬರುವ ವರ್ಷಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳ ಸಾಹಿತ್ಯಕ್ಕೂ ವೇದಿಕೆಯನ್ನು ಕಲ್ಪಿಸಿ ಕೊಡಲಾಗುವುದು ಹಾಗೂ ಆ ಮೂಲಕ ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರೀತಿ ಹೆಚ್ಚುವಂತೆ ಪ್ರಯ ತ್ನಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಬಾರ್ಕೂರಿನಲ್ಲಿ ಶನಿವಾರ ಬಾರ್ಕೂ ರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ, ಧರ್ಮಸ್ಥಳ ಶಾಂತಿವನ ಟ್ರಸ್ಟ್, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಬಾರ್ಕೂರು ಆನ್‌ಲೈನ್ ಡಾಟ್‌ ಕಾಮ್, ಬೆಳಗಾವಿ ಮತ್ತು ಮಂಗಳೂರಿನ ರಾಮಕೃಷ್ಣ ಆಶ್ರಮದ ಸಹಯೋಗ ದೊಂದಿಗೆ ನಡೆದ 16ನೆಯ ವರ್ಷದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಮಕ್ಕಳ ಸಾಹಿತ್ಯ ಸಮ್ಮೇಳ ನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳು ಹಾದಿ ತಪ್ಪದಂತೆ ಅವರಿಗೆ ಉತ್ತಮ ಜೀವನ ಮೌಲ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಾರ್ಕೂರಿನ ವಿವೇಕಾನಂದ ಕೇಂದ್ರವು ಹದಿನಾರು ವರ್ಷಗಳಿಂದ ಮಕ್ಕಳ ಸಾಹಿತ್ಯ ಸಮ್ಮೇಳ ನದ ಮೂಲಕ ನಿಸ್ವಾರ್ಥ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿ ಸ್ವಸ್ತಿಕ್ ಭಂಡಾರಿ, ಸಾಹಿತ್ಯದ ಓದಿನ ಅವಶ್ಯಕತೆಯತ್ತ ಬೆಟ್ಟು ಮಾಡಿ ಸಾಹಿತ್ಯ ವ್ಯಕ್ತಿತ್ವನ್ನು ರೂಪಿಸುತ್ತದೆ. ಮಕ್ಕಳು ಒಳ್ಳೆಯ ನಾಗರಿಕರಾಗ ಬೇಕಾದರೆ ಸಾಹಿತ್ಯ ನೀಡುವ ಜೀವನ ಪಾಠಗಳನ್ನು ಮನನ ಮಾಡುವ ನಿತ್ಯಾ ಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು  ಹೇಳಿದರು.

ಮಕ್ಕಳ ಪರವಾಗಿ ನಡೂರು ವಾಣಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚೈತ್ರ ಕೆ.ಆರ್ ಮತ್ತು  ಶಿಕ್ಷಕರ ಪರವಾಗಿ ಮಣೂರು ಪಡುಕೆರೆಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸತೀಶ್ ಐತಾಳ್ ಅನಿಸಿಕೆಗಳನ್ನು ಹಂಚಿಕೊಂಡರು. ಸಮ್ಮೇಳನಾಧ್ಯಕ್ಷ  ಸ್ವಸ್ತಿಕ್ ಭಂಡಾರಿ ಮತ್ತು ಕ್ರೀಡಾಪಟು ಕರಿಷ್ಮಾ ಸನಿಲ್‌ ಅವರನ್ನು ಸನ್ಮಾನಿಸಲಾಯಿತು.
ನವ್ಯಾ ಸ್ವಾಗತಿಸಿದರು. ಸಮ್ಮೇಳನದ ಪ್ರಧಾನ ಸಂಘಟಕ ರಾಮಭಟ್ಟ ಸಜಂ ಗದ್ದೆ ವಂದಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.