ADVERTISEMENT

ಸೂಕ್ಷ್ಮ ವಿಮೆ ಪಾಲಿಸಿ: ವ್ಯಾಪಕ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:47 IST
Last Updated 25 ಅಕ್ಟೋಬರ್ 2016, 9:47 IST
ಸೂಕ್ಷ್ಮ ವಿಮೆ ಪಾಲಿಸಿ: ವ್ಯಾಪಕ ವಂಚನೆ
ಸೂಕ್ಷ್ಮ ವಿಮೆ ಪಾಲಿಸಿ: ವ್ಯಾಪಕ ವಂಚನೆ   

ಉಡುಪಿ: ಕಡೂರು ಹಾಗೂ ತರೀಕೆರೆ ಯಲ್ಲಿ ಸಮನ್ವಯ ಎಂಬ ಸಂಸ್ಥೆ ಸೂಕ್ಷ್ಮ ವಿಮೆ ಯೋಜನೆ ಜೀವನ ಸುಮಧುರ ಪಾಲಿಸಿಗಳನ್ನು ಮಾಡಿಸಿ ಕೋಟ್ಯಂತರ ರೂಪಾಯಿ ವಿಮೆ ಕಂತು ಸಂಗ್ರಹಿಸಿ ಅದನ್ನು ಜೀವ ವಿಮೆ ನಿಗಮಕ್ಕೆ ಕಟ್ಟದೆ ಸಾವಿರಾರು ಜನರಿಗೆ ವಂಚನೆ ಮಾಡಿದೆ. ಈ ಪ್ರಕರಣದಲ್ಲಿ ಎಲ್‌ಐಸಿ ಅಧಿಕಾ ರಿಗಳೂ ಶಾಮೀಲಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿ ಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಒತ್ತಾಯಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಜನರಿಗೂ ವಿಮೆ ಸೌಲಭ್ಯ ಸಿಗಬೇಕು ಎಂಬ ಕಾರಣಕ್ಕೆ ಸೂಕ್ಷ್ಮ ವಿಮೆ ಯೋಜನೆ ಜಾರಿಗೆ ತರಲಾಗಿತ್ತು. ವಾರ್ಷಿಕ ಕನಿಷ್ಠ ₹ 6 ಸಾವಿರ ವಿಮೆ ಮೊತ್ತ ನಿಗದಿ ಮಾಡ ಲಾಗಿತ್ತು. ವಿಮೆ ಮಾಡಿಸುವ ಮತ್ತು ಪ್ರೀಮಿಯಂ ಮೊತ್ತ ಸಂಗ್ರಹಿಸಲು ಪ್ರತಿ ಜಿಲ್ಲೆಯಲ್ಲಿ ಸರ್ಕಾರೇತರ ಸಂಸ್ಥೆಗಳನ್ನು ನೇಮಿಸಲಾಗಿತ್ತು. ಅದರಂತೆ ಚಿಕ್ಕಮಗ ಳೂರಿನಲ್ಲಿ ಸಮನ್ವಯ ಸಂಸ್ಥೆ ಈ ಹೊಣೆ ಹೊತ್ತಿತ್ತು. ಈ ಸಂಸ್ಥೆಯು ಏಜೆಂಟ್‌ ಗಳನ್ನು ನೇಮಿಸಿಕೊಂಡಿತ್ತು. ಸಾವಿರಾರು ಜನರ ಮೊದಲ ವಿಮೆ ಕಂತನ್ನು ಎಲ್‌ ಐಸಿಗೆ ಪಾವತಿಸಿದ್ದರಿಂದ ಎಲ್ಲರಿಗೂ ಬಾಂಡ್‌ ಬಂದಿದೆ. ಆದರೆ, ಆ ನಂತರ ಸಂಸ್ಥೆ ಪ್ರೀಮಿಯಂ ಮೊತ್ತವನ್ನು ಕಟ್ಟಿಯೇ ಇಲ್ಲ. ಆದರೆ ಏಜೆಂಟ್‌ಗಳಿಗೆ ಮಾತ್ರ ಕಮಿ ಷನ್‌ ನೀಡಿತ್ತು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಮೆ ಮಾಡಿಸಿದ್ದ ಮಹಿಳೆಯೊಬ್ಬರು 2013ರಲ್ಲಿ ತೀರಿಕೊಂಡರು. ಅವರ ವಿಮೆ ಮೊತ್ತವನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ಪ್ರೀಮಿಯಂ ಕಟ್ಟದೆ ಆ ಪಾಲಿಸಿ ರದ್ದಾಗಿದೆ ಎಂದು ಗೊತ್ತಾ ಯಿತು. ಆ ನಂತರ ಸಾವಿರಾರು ಜನರ ಪ್ರೀಮಿಯಂ ಹಣ ಕಟ್ಟದಿರುವುದು ಗೊತ್ತಾಯಿತು. ಇದಾದ ನಂತರ 2014 ರಲ್ಲಿ ಎಲ್ಐಸಿ ಅಧಿಕಾರಿಗಳು ಕಡೂರು ಹಾಗೂ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಈ ವರೆಗೂ ತನಿಖೆ ಪೂರ್ಣವಾಗಿಲ್ಲ.

ಖಾಸಗಿ ಸಂಸ್ಥೆಯೊಂದು ಸಾವಿರಾರು ಪಾಲಿಸಿಗಳ ಪ್ರೀಮಿಯಂ ಮೊತ್ತ ವರ್ಷಾ ನುಗಟ್ಟಲೆ ಕಟ್ಟದಿದ್ದರೂ ಎಲ್‌ಐಸಿಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಏಕೆ ಅನುಮಾನ ಬರಲಿಲ್ಲ. ಅವರು ಏಕೆ ಪರಿ ಶೀಲನೆ ಮಾಡುವ ಗೋಜಿಗೆ ಹೋಗಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೆ ಅಧಿ ಕಾರಿಗಳು  ಇದರಲ್ಲಿ ಶಾಮೀಲಾಗಿರಬ ಹುದು ಎಂಬ ಅನುಮಾನ ಬರುತ್ತದೆ ಎಂದು ಹೇಳಿದರು.

₹3 ಕಮಿಷನ್‌್, ಲಕ್ಷಾಂತರ ರೂಪಾಯಿ ಹೊಣೆ: ಈ ಪ್ರಕರಣದಲ್ಲಿ ವಿಮಾ ಮೊತ್ತ ಪಾವತಿಸಿದವರು ಹಾಗೂ ಏಜೆಂಟ್‌ಗಳು ವಂಚನೆಗೊಳಗಾಗಿದ್ದಾರೆ. ಹಣ ಕಟ್ಟಿದವರು ಏಜೆಂಟ್‌ಗಳಿಗೆ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ. ನೂರಾರು ಏಜೆಂಟ್‌ಗಳು ಪ್ರಾಣ ಕಳೆದು ಕೊಳ್ಳುವಂತಹ ಹಂತ ತಲುಪಿಸಿದ್ದಾರೆ. ಇವರಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಕಣ್ಣೀರಿಟ್ಟ ಏಜೆಂಟರು
ಉಡುಪಿ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಹಿರಿಯ ವಿಭಾಗೀಯ ಪ್ರಬಂಧಕರನ್ನು ಭೇಟಿ ಮಾಡಿದ ವಂಚನೆಗೊಳಗಾದ ಸೂಕ್ಷ್ಮ ವಿಮೆ ಪಾಲಿಸಿ ಕಡೂರು ತಾಲ್ಲೂಕಿನ ಏಜೆಂಟರು ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟರು. ₹100 ಪ್ರೀಮಿಯಂ ಮೊತ್ತ ಸಂಗ್ರಹಿಸಿದರೆ ₹3 ಕಮಿಷನ್‌ ಸಿಗುತ್ತಿತ್ತು. ಅದರಿಂದ ಉತ್ತೇಜಿತರಾಗಿ ನೂರಾರು ಪಾಲಿಸಿ ಮಾಡಿಸಿದ್ದೇವೆ. ಈಗ ವಿಮೆ ರದ್ದಾಗಿರುವ ಕಾರಣ ಹಣ ನೀಡುವಂತೆ ಜನರು ಪೀಡಿಸುತ್ತಿದ್ದಾರೆ. ಹಣ ಪಾವತಿಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ಎಂದು ರಘು, ಶ್ರೀನಿವಾಸ ಮೂರ್ತಿ, ಲಕ್ಷ್ಮೀ, ಜಯಾ, ಗೀತಾ, ಅನ್ನಪೂರ್ಣ ಕಣ್ಣೀರಿಟ್ಟರು.

‘ಕಡೂರು ಮತ್ತು ತರೀಕೆಯಲ್ಲಿ ಸುಮಾರು ₹30 ಲಕ್ಷ  ವಿಮೆ ಮೊತ್ತ ಪಾವತಿಸದೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಕಡೂರು ಹಾಗೂ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ವಾಗಬೇಕು. ನಮ್ಮ ಹಂತದಲ್ಲಿ ಹಣ ಪಾವತಿ ಮಾಡಲು ಬರುವುದಿಲ್ಲ’ ಎಂದು ಹಿರಿಯ ವಿಭಾಗೀಯ ಪ್ರಬಂಧಕ ವಿಶ್ವೇಶ್ವರ ರಾವ್ ಹೇಳಿದರು. ಮಾರಾಟ ವಿಭಾಗದ ಪ್ರಬಂಧಕ ಕೆ.ಎನ್. ಶಶಿಧರ್‌, ಮಾರ್ಕೆಟಿಂಗ್ ವ್ಯವಸ್ಥಾಪಕ ರಾಜೇಶ್ ಮುಧೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT