ADVERTISEMENT

‘ಹಿಂದಿನ ಆಹಾರ ಪದ್ಧತಿ ಇಂದು ಅವಗಣನೆ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:17 IST
Last Updated 15 ಜುಲೈ 2017, 6:17 IST

ಕಾರ್ಕಳ :  ‘ಹಿಂದಿನ ಆಹಾರದ ಪದ್ಧತಿ ಇಂದು ಅವಗಣನೆಗೆ ಗುರಿಯಾಗುತ್ತಿದೆ ’ ಎಂದು ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದರು. ಗುರುವಾರ ಇಲ್ಲಿ ತೋಟಗಾರಿಕಾ ಇಲಾಖೆ, ಸರ್ವೋದಯ ಸಾವಯವ ಕೃಷಿ ಗ್ರಾಹಕರ ಬಳಗ, ಕೃಷಿ ಇಲಾಖೆ ಹಾಗೂ ಭಾರತೀಯ ಕಿಸಾನ್ ಸಂಘಗಳ ಸಹಭಾಗಿತ್ವದಲ್ಲಿ ಹಲಸಿನ ಮೇಳ -ಸಾವಯವ ಸಂತೆ ಹಾಗೂ ಸಿರಿಧಾನ್ಯಗಳ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಲಸಿನ ವಿವಿಧ ಉತ್ಪನ್ನಗಳ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾಹಿತಿ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಹಲಸಿಗೆ ವಿಶೇಷ ಆದ್ಯತೆ ದೊರೆಯುವಂತಾಗಲಿ ಎಂದರು. ಕೃಷಿ ಇಲಾಖೆಯ ಸಹಾಯಕ ಉಪನಿರ್ದೇಶಕ ಜಯರಾಜ್ ಮಾತನಾಡಿ, ಹಲಸಿನ ಮಹತ್ವದ ಕುರಿತು ತಿಳಿಸಿದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ್ ಮಾತನಾಡಿ ಇಲಾಖಾ ವತಿಯಿಂದ ಹಲಸು ಬೆಳೆಯಲು ಸಿಗುವ ಸಹಾಯಧನಗಳ ಕುರಿತು ಮಾಹಿತಿ ನೀಡಿದರು.

ವಾದಿರಾಜ ಅಚಾರ್ಯ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ ಚಂದ್ರ ಜೈನ್ , ಅನಂತ್ ಭಟ್ , ಹರಿಶ್ಚಂದ್ರ ತೆಂಡೂಲ್ಕರ್, ಗೋವಿಂದ ಭಟ್ ಇದ್ದರು. ಸವಿತಾ ಭಟ್ ಅಡ್ವಾಯಿ ಹಲಸಿನ ಖಾದ್ಯಗಳ ಕುರಿತು ಪ್ರಾತ್ಯಕಿಕೆ ನೀಡಿದರು.  ಹಲಸಿನ ಪ್ರದರ್ಶನ ಹಾಗೂ ಮಾರಾಟ, ಕಸಿ ಗಿಡಗಳ ಮಾರಾಟ, ಸಾವಯವ ಸಂತೆ, ಸಿರಿಧಾನ್ಯಗಳ ಪ್ರಾಮುಖ್ಯ, ಬಳಕೆ ವಿಧಾನಗಳ ಕುರಿತು ಅರಿವು ಮೂಡಿಸುವ ವಿವಿಧ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.

ADVERTISEMENT

ಹಲಸಿನ ಮೇಳದಲ್ಲಿ ಹಲಸಿನ ಗಟ್ಟಿ, ಹಲಸಿನ ಮುಳಕ, ಹಲಸಿನ ಜಾಂ, ಹಲಸಿನ ಸೀರಾ, ಹಲಸಿನ ಕೇಕ್, ಹಲಸಿನ ಹಪ್ಪಳ ,ಹಲಸಿನ ಪೋಡಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಸಿಹಿದೋಸೆ, ಉಪ್ಪಿನ ಕಾಯಿ ಮೊದಲಾದ ಖಾದ್ಯಗಳು ಗ್ರಾಹಕರ ಬಾಯಿಯಲ್ಲಿ ನೀರೂರಿಸಿದವು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಹಲಸಿನ ಉತ್ಪನ್ನಗಳನ್ನು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.