ADVERTISEMENT

‘ಕಥೆಗಳು ದೀಪಗಳಂತೆ, ಮುಚ್ಚಿಡಬೇಡಿ’

ಡಾ.ಎಚ್‌.ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2014, 5:14 IST
Last Updated 14 ಆಗಸ್ಟ್ 2014, 5:14 IST

ಕುಂದಾಪುರ: ‘ಕಥೆಗಳು ಪ್ರಜ್ವಲಿಸುವ ದೀಪಗಳಂತೆ. ಇದನ್ನು ಮುಚ್ಚಿಡುವ ಪ್ರಯತ್ನ ಮಾಡಬಾರದು. ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿಸುವಂತೆ, ಕೋಟ್ಯಾಂತರ ದೀಪಗಳ ಬೆಳಕಿಗೆ ಅನೂಕೂಲವಾಗುವಂತೆ ಅವುಗಳನ್ನು ತೆರೆದಿಡಬೇಕು’ ಎಂದು ಸಾಹಿತಿ ಕೃಷ್ಣಮೂರ್ತಿ ಹನೂರು ಹೇಳಿದರು.

ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಆರ್‌.ಎನ್‌.ಶೆಟ್ಟಿ ಹಾಲ್‌ನಲ್ಲಿ ಬುಧವಾರ ನಡೆದ ಸಾಹಿತ್ಯ ಮಂಥನ ಹಾಗೂ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಾರಂಭದಲ್ಲಿ ‘ಅಜ್ಙಾತನೊಬ್ಬನ ಆತ್ಮ ಚರಿತ್ರೆ’ ಕಾದಂಬರಿಗೆ 2014ನೇ ಸಾಲಿನ ಡಾ.ಎಚ್.ಶಾಂತಾರಾಮ್ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಬದುಕಿನ ಒಂದು ಭಾಗದ ಅರ್ಥವನ್ನು ಅರಿತುಕೊಳ್ಳಲು ಮಾತ್ರ ಸಾಧ್ಯವಾಗುತ್ತದೆ. ಜೀವನದ ಇನ್ನೊಂದು ಭಾಗವನ್ನು ತಿಳಿದುಕೊಳ್ಳುವುದು ನಾವು ಜನಪದರ ಜೀವನದ ಒಳ ಹೊಕ್ಕಾಗ. ಈ ರೀತಿ ಒಳ ಹೊಕ್ಕಾಗ ಮಾತ್ರ ನಾವು ಕಂಡ ಇತಿಹಾಸದ ವಾಸ್ತಾವದ ಇನ್ನೊಂದು ಮುಖವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಾ.ಎಸ್.ನಟರಾಜ ಬೂದಾಳು ಕೃತಿಯ ಕುರಿತು ಮಾತನಾಡಿ, ‘ನಮ್ಮ ಚರಿತ್ರೆ ಹಾಗೂ ಇತಿಹಾಸದ ಪುಟಗಳನ್ನು ತಿರುವಿದರೆ, ಆರಂಭದಿಂದಲೂ ಮಹಿಳೆಯರು ಅಸುರಕ್ಷಿತ ವಾತಾವರಣದಲ್ಲಿಯೇ ಬೆಳೆದು ಬಂದಿರುವ ಸತ್ಯದ ದರ್ಶನವಾಗುತ್ತದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಾದರೂ ಮಹಿಳೆಯರ ಬದುಕು ಸುರಕ್ಷಿತವಾಗಿದೆಯೇ? ಎನ್ನುವ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿರುವ ಈ ಕಾಲ ಘಟ್ಟದಲ್ಲಿ, ಹನೂರು ಅವರ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ಕಾದಂಬರಿ ಓದುಗರಲ್ಲಿ ಪ್ರಶ್ನಿಸಿಕೊಳ್ಳುವ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ವಿಶ್ಲೇಷಿಸಿದರು.

ಮಣಿಪಾಲದ ಆಕಾಡೆಮಿ ಆಫ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.  ಪ್ರಶಸ್ತಿ ಪ್ರದಾನ ಸಮಿತಿಯ ಸದಸ್ಯರು ಗಳಾದ ಪ್ರೊ.ವಸಂತ ಬನ್ನಾಡಿ, ಕೋ.ಶಿವಾನಂದ ಕಾರಂತ್, ಕಾಲೇಜಿನ ವಿಶ್ವಸ್ಥರಾದ ಕೆ.ಶಾಂತಾರಾಮ್ ಪ್ರಭು, ಎಸ್.ಸದಾನಂದ ಚಾತ್ರ ಹಾಗೂ ಭಂಡಾರಕಾರ್ಸ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ ಗೊಂಡಾ ವೇದಿಕೆಯಲ್ಲಿದ್ದರು.

ಸಭಾ ಕಾರ್ಯಕ್ರಮದ ಮೊದಲು ಗುರುರಾಜ್ ಮಾರ್ಪಳ್ಳಿ ಮತ್ತು ತಂಡದವರಿಂದ ಬೇಂದ್ರೆ ಕಾವ್ಯ ಗಾಯನ ಹಾಗೂ ಸಾಹಿತ್ಯ ಮಂಥನ ನಡೆಯಿತು. ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ ನಾರಾಯಣ ಶೆಟ್ಟಿ ಸ್ವಾಗತಿಸಿದರು, ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕಿ ಪ್ರೊ.ರೇಖಾ ಬನ್ನಾಡಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಸಮಿತಿಯ ಸದಸ್ಯೆ ಜಾನಕಿ ಬ್ರಹ್ಮಾವರ ವಂದನೆ ಸಲ್ಲಿಸಿದರು, ಉಪನ್ಯಾಸಕ ವಕ್ವಾಡಿ ರಂಜಿತ್‌ ಕುಮಾರ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.